ಬೆಂಗಳೂರು :
“ಪತ್ರಿಕೋದ್ಯಮದ ಘನತೆ, ಗೌರವ ಕಾಪಾಡಿಕೊಳ್ಳಿ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಿಮ್ಮ ಲೇಖನಿ ಬಳಸಿ. ವ್ಯಾಪಾರಸ್ಥರ ಲಾಭಕ್ಕೆ ತಲೆ ಬಾಗಬೇಡಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಸಮಾರಂಭದಲ್ಲಿ “ವರ್ಷದ ವ್ಯಕ್ತಿ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;

“ಆಯಾ ವರ್ಷ ಪ್ರಭಾವ ಬೀರುವ ವ್ಯಕ್ತಿಗಳನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದೀರಿ ಎಂದು ಭಾವಿಸಿದ್ದೇನೆ.

ಜಾಫರ್ ಷರೀಫ್ ಅವರು ರೈಲ್ವೆ ಸಚಿವರಾಗಿದ್ದಾಗ ನಾನು ವಿದ್ಯಾರ್ಥಿ ನಾಯಕನಾಗಿ ರೈಲು ತಡೆದು ಚಳವಳಿ ಮಾಡಿದ್ದ ಫೋಟೋ ಕಾಣಿಕೆಯೊಂದಿಗೆ ನನಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿದ್ದೀರಿ.

43 ವರ್ಷಗಳ ರಾಜಕೀಯ ಜೀವನದಲ್ಲಿ ಎಂದೂ ಕೂಡ ಸನ್ಮಾನ ಒಪ್ಪಿ, ಮಾಡಿಸಿಕೊಂಡಿರಲಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮನ್ನು ಬಿಟ್ಟು ನಮ್ಮ ಬದುಕಿಲ್ಲ. ಹೀಗಾಗಿ ನಾನು ಒಪ್ಪಿ ಈ ಗೌರವ ಸ್ವೀಕರಿಸಿದ್ದೇನೆ. ನೀವು ಒಳ್ಳೆಯದಾದರೂ ಹೇಳಿ, ಕೆಟ್ಟದಾದರೂ ಹೇಳಿ. ಸಂಸಾರದಂತೆ ನಿಮ್ಮ ಜತೆ ಬದುಕಬೇಕು.

ನೀವು ನನಗೆ ಕನಕಪುರದ ಬಂಡೆ ಎಂದು ಬಿರುದು ಕೊಟ್ಟಿರಿ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ನಾನು ಹೇಳಿದ್ದೆ. ನೀವು ನನಗೆ ಟ್ರಬಲ್ ಶೂಟರ್ ಎಂಬ ಹೆಸರು ಕೊಟ್ಟಿದ್ದೀರಿ. ಇದೆಲ್ಲದರ ಸೃಷ್ಟಿಕರ್ತರು ನೀವೇ. ಇಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲವೂ ನೀವೇ. ತೆಗಳುವವರು ನೀವೇ, ಹೊಗಳುವವರೂ ನೀವೇ. ಮೇಲೆ ಕೂರಿಸುವವರೂ ನೀವೇ, ಕೆಳಗೆ ಬೀಳಿಸುವವರೂ ನೀವೇ.

ನೀವು ಏನಾದರೂ ಮಾಡಿ, ಆದರೆ ಸತ್ಯವನ್ನು ಬರೆಯಿರಿ. ಎಲ್ಲವನ್ನೂ ಬದಿಗೊತ್ತಿ ಸಹಾಯ ಮಾಡಿ ಎಂದು ನಾನು ಕೇಳುವುದಿಲ್ಲ. ಡಿವಿಜಿ ಅವರು ಹೇಳಿದಂತೆ ಬರೆಯುವುದಕ್ಕೆ ಒಂದು ಬೆಲೆ, ಬರೆಯದೆ ಇರುವುದಕ್ಕೆ ಒಂದು ಬೆಲೆಯಂತೆ ಆಗಬಾರದು.

ನೀವಿಂದು ಹಾಕಿರುವ ಹಾರ ಬಹಳ ಭಾರವಾದ ಹಾರ. ಅದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ.

ಸೋನಿಯಾ ಗಾಂಧಿ ಅವರು ತಿಹಾರ್ ಜೈಲಿಗೆ ಬಂದು ನಾನು ಕೊಡುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು. ಅದರಂತೆ ನನಗೆ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ನೀಡಿದರು. ನಂತರ ನಾನು, ಸಿದ್ದರಾಮಯ್ಯ ಅವರು ಸೇರಿ ಪಕ್ಷಕ್ಕೆ ಧಕ್ಕೆಯಾಗದಂತೆ ಸಂಘಟನೆ ಮಾಡಿದೆವು.

ನಮಗೆ ಒಂದೇ ಒಂದು ನಂಬಿಕೆ ಎಂದರೆ ಅದು ರಾಜ್ಯದ ಜನ. ಎಷ್ಟೋ ಮಂದಿ ನಾವು 90-95 ಸ್ಥಾನ ಪಡೆಯುತ್ತೇವೆ. ಮತ್ತೆ ಮೈತ್ರಿ ಸರ್ಕಾರ ಬರುತ್ತದೆ ಎಂದು ಹೇಳಿದ್ದರು. ನಾವಿಬ್ಬರೂ ಯಾರ ಸಹಕಾರ ಇಲ್ಲದೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಆತ್ಮವಿಶ್ವಾಸದಲ್ಲಿ ಕೆಲಸ ಮಾಡಿದೆವು. ಪರಿಣಾಮ ನಮಗೆ ಸೇವೆ ಮಾಡಲು ಅವಕಾಶ ನೀಡಿದ್ದೀರಿ.

ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದಾಗ ಗಂಡ-ಹೆಂಡತಿ, ಅತ್ತೆ-ಸೊಸೆ ಮಧ್ಯೆ ತಂದಿಡುತ್ತಾರೆ. ಕರ್ನಾಟಕ ಆರ್ಥಿಕ ಸಮಸ್ಯೆಗೆ ಸಿಲುಕಿ ಪಾಕಿಸ್ತಾನ, ಶ್ರೀಲಂಕಾ ಪರಿಸ್ಥಿತಿ ಬರುತ್ತದೆ ಎಂದು ಬರೆದರು. ನಾವು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ.

ನಾನಾಗಲಿ, ಸಿದ್ದರಾಮಯ್ಯ ಅವರಾಗಲಿ ಏಕಾಏಕಿ ಈ ಸ್ಥಾನಕ್ಕೆ ಬಂದಿಲ್ಲ. ನಾವು ನಂಬಿಕೆ ಇಟ್ಟಿರುವ ಸಿದ್ಧಾಂತದ ಪರ ಹೋರಾಡುತ್ತಾ ಇಲ್ಲಿಯವರೆಗೂ ಬಂದಿದ್ದೇನೆ. ನನಗೆ ಗುರುವೂ ಇದ್ದಾರೆ, ಗುರಿಯೂ ಇದೆ. ಆತ್ಮವಿಶ್ವಾಸವೇ ನನ್ನ ದೊಡ್ಡ ಅಸ್ತ್ರ. ನಿಮಗೆ ನಿಮ್ಮ ಆತ್ಮಬಲದ ಮೇಲೆ ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು.

ನನ್ನ ವಿರುದ್ಧ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಕರೆದಾಗ ಅನೇಕರು ನಿರೀಕ್ಷಣಾ ಜಾಮೀನು ಪಡೆಯಲು ಸಲಹೆ ನೀಡಿದರು. ಆದರೆ ನಾನು ಅದನ್ನು ಪಡೆಯಲಿಲ್ಲ. ನಾನು ತಪ್ಪು ಮಾಡಿಲ್ಲ. ನಾನು ರಾಜಕೀಯ ಕೆಲಸ ಮಾಡಿದ್ದೇನೆ. ಜೈಲಲ್ಲಿ ಇದ್ದಾಗ ನನ್ನ ಮಕ್ಕಳು ಏನೆಂದುಕೊಳ್ಳುತ್ತಾರೆ ಎಂದು ಯೋಚಿಸಿದಿನೇ ಹೊರತು ಎಂದೂ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ನ್ಯಾಯ ಸಿಕ್ಕೆ ಸಿಗುತ್ತದೆ, ರಾಜ್ಯದಲ್ಲಿ ಏನಾದರೂ ಸಾಧನೆ ಮಾಡಿಯೇ ಮಾಡುತ್ತೇನೆ ಎಂಬ ನಂಬಿಕೆ ನನ್ನಲ್ಲಿ ಅಂದೂ ಇತ್ತು, ಇಂದೂ ಇದೆ, ನಾಳೆಯೂ ಇರುತ್ತದೆ.

ನಾವು ತಪ್ಪು ಮಾಡಿಲ್ಲದಿದ್ದರೆ, ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದು ಭಾವಿಸಿದ್ದೇನೆ. ನಾವು ತಪ್ಪು ಮಾಡಿದರೆ ನಮ್ಮನ್ನು ಟೀಕಿಸಿ. ನಮ್ಮನ್ನು ಟೀಕಿಸುವವರ ಬಗ್ಗೆ ಹೆಚ್ಚು ವಿಶ್ವಾಸ ಇರುತ್ತದೆ. ನನಗೆ ಹೊಗಳುಭಟ್ಟರ ಬಗ್ಗೆ ನಂಬಿಕೆ ಇಲ್ಲ.

ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ನ್ಯಾಯಪೀಠದಿಂದ ನಮಗೆ ಯಾವತ್ತೂ ಅನ್ಯಾಯ ಆಗುವುದಿಲ್ಲ ಎಂಬ ನಂಬಿಕೆ ಇದೆ.

ಮುಂದೆ ಪತ್ರಿಕೋದ್ಯಮ ಯಾವ ರೀತಿ ಸಾಗಬೇಕು ಎಂಬ ವಿಚಾರವಾಗಿ ಯಾವತ್ತಾದರೂ ಯುವ ಪತ್ರಕರ್ತರನ್ನು ಸೇರಿಸಿ ಕಾರ್ಯಕ್ರಮ ಮಾಡಿ. ಆಗ ಇನ್ನಷ್ಟು ಮಾತನಾಡುತ್ತೇನೆ.

ರಾಜಕೀಯವಾಗಿ ನಮ್ಮನ್ನು ತಿದ್ದಿ. ಆದರೆ ವ್ಯಾಪಾರಸ್ಥರ ಕೈಗೆ ಪತ್ರಿಕೋದ್ಯಮ ಸಿಕ್ಕಿ ಸತ್ಯ ಮುಚ್ಚುವ ಪರಿಸ್ಥಿತಿ ಬರುವುದು ಬೇಡ. ಇದಕ್ಕೆ ನೀವು ತಲೆ ಬಾಗಬಾರದು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಾಯ. ಯಾವುದಾದರೂ ಘಟನೆ ನಡೆದರೆ ಇವರೇ ತೀರ್ಪು ನೀಡುವ ಪರಿಸ್ಥಿತಿ ಬಂದಿದೆ. ಇದು ಆಗಬಾರದು ಎಂದು ಪ್ರಾರ್ಥಿಸುತ್ತೇನೆ.”