ಬೆಳಗಾವಿ : ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಇದೀಗ ನಿಕಟಪೂರ್ವ ಬಿಜೆಪಿ ಸಂಸದೆ ಮಂಗಲಾ ಅಂಗಡಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಗೆಲುವು ಸಾಧಿಸಿರುವುದು ಬಹಳ ಸಂತೋಷದ ವಿಷಯ. ಸುರೇಶ ಅಂಗಡಿ ಅವರು ಹೇಗೆ ಲೀಡ್ ನಲ್ಲಿ ಗೆದ್ದು ಬರುತ್ತಿದ್ದರೋ ಅದೇ ಮಾದರಿಯಲ್ಲಿ ಈಗ ಶೆಟ್ಟರ್ ಆರಿಸಿ ಬಂದಿದ್ದಾರೆ. ಬೆಳಗಾವಿ ಬಿಜೆಪಿ ಭದ್ರಕೋಟೆಯಾಗಿದೆ. ಅದನ್ನು ಮತ್ತೆ ಉಳಿಸಿಕೊಂಡಿದ್ದೇವೆ ಎಂದು ಹೇಳಿದರು.

ಆದರೆ ಕಾಂಗ್ರೆಸ್ ಪಕ್ಷ ಕಳೆದ 20 ವರ್ಷಗಳಲ್ಲಿ ಸುರೇಶ ಅಂಗಡಿಯವರು ಏನು ಮಾಡಿಲ್ಲ, ಏನು ಮಾಡಿಲ್ಲ ಎಂದು ಅಪಪ್ರಚಾರ ಮಾಡಿತು. ಜನ ಹಾಗೂ ದೇವರು ಅವರಿಗೆ ಈಗ ತಕ್ಕ ಪಾಠ ಕಲಿಸಿದ್ದಾರೆ. ಸುರೇಶ ಅಂಗಡಿ ಅವರು ಬೆಳಗಾವಿಗೆ ಏನು ಮಾಡಿದ್ದರು ಎನ್ನುವುದು ಜನರಿಗೆ ಗೊತ್ತಿತ್ತು. ಆದರೆ, ಅವರ ಬಗ್ಗೆಯೇ ಬಹಳ ಆರೋಪ ಮಾಡಿದರು. ಇದರಿಂದ ನಮ್ಮ ಮನಸ್ಸಿಗೆ ಬಹಳ ಬೇಸರವಾಗಿತ್ತು. ಬೆಳಗಾವಿ ಗ್ರಾಮೀಣದಲ್ಲೇ ಬಿಜೆಪಿಗೆ ಅತ್ಯಂತ ಹೆಚ್ಚು ಲೀಡ್ ಬಂದಿದೆ. ಬೆಳಗಾವಿಗೆ ಶೆಟ್ಟರ್ ಹೊಸಬರಲ್ಲ, ಅವರು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮತದಾರರು ಅವರನ್ನು ಅತ್ಯಂತ ಪ್ರೀತಿಯಿಂದ ಆರಿಸಿ ಕಳಿಸಿದ್ದಾರೆ ಎಂದು ಪ್ರತಿಕ್ರಿಸಿದರು. ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ. ಜಗದೀಶ್ ಶೆಟ್ಟರ್ ಕೇಂದ್ರ ಸಚಿವರಾಗುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.