ಬೆಳಗಾವಿ: ಚಿಕ್ಕೋಡಿ ಲೋಕಸಭಾ ಚುನಾವಣೆ ವೇಳೆ ನಮ್ಮವರೇ ನಮಗೆ ಮೋಸ ಮಾಡಿರುವುದರಿಂದ ಕಾಂಗ್ರೆಸ್‌ ಗೆಲುವಿನ ಲೀಡ್‌ ಕಡಿಮೆಯಾಗಿದೆ. ಕುಡಚಿ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ ಚುನಾವಣೆಯಲ್ಲಿ ತಮ್ಮ ಸಂಬಂಧಿ ಪರ ಕೆಲಸ ಮಾಡಿದ್ದಾರೆ. ಈ ಕುರಿತು ಪಕ್ಷದ ಹೈಕಮಾಂಡ್‌ಗೆ ದೂರು ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ನಮ್ಮವರೇ ವಿರೋಧ ವ್ಯಕ್ತಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಶಾಸಕ ತಮ್ಮಣ್ಣವರ ಉದ್ದೇಶಪೂರ್ವಕವಾಗಿಯೇ ವಿರೋಧ ಮಾಡಿದ್ದಾರೆ. ನಮ್ಮವರೇ ನಮಗೆ ಮೋಸ ಮಾಡಿರುವುದರಿಂದ ನಮ್ಮ ಗೆಲುವಿನ ಮತಗಳ ಅಂತರ ಕಡಿಮೆಯಾಗಿದೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದೇ ಅನಾವಶ್ಯಕ ಗೊಂದಲ ಸೃಷ್ಟಿಸುವ ಪ್ರಯತ್ನವನ್ನೂ ವಿರೋಧಿಗಳು ಮಾಡಿದ್ದರು. ಹೊರಗಿನವರೂ ಇಲ್ಲೇಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ಪಕ್ಷದ ಸಾಧನೆ, ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಜನತೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಮಾತ್ರ ನಮಗೆ ಹಿನ್ನೆಡೆಯಾಗಿದೆ. ಅದು ನಮಗೆ ಮೊದಲೇ ಗೊತ್ತಿತ್ತು. ಹಳೆಯ ಕಾಂಗ್ರೆಸ್ಸಿಗರು ಮನಸ್ಸು ಪೂರ್ವಕವಾಗಿ ಪ್ರಚಾರ ಮಾಡಿದರು. ಆದರೆ, ಇತ್ತೀಚೆಗೆ ಬಿಜೆಪಿಯಿಂದ ಪಕ್ಷಕ್ಕೆ ಬಂದವರು ಪೂರ್ಣ ಪ್ರಮಾಣದ ಬೆಂಬಲ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಬಾರಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ. ಕಿರಿಯ ವಯಸ್ಸಿನಲ್ಲೇ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ ಕೀರ್ತಿ ಚಿಕ್ಕೋಡಿ ಕ್ಷೇತ್ರದ ಮತದಾರರಿಗೆ ಸಲ್ಲುತ್ತದೆ. ಕ್ಷೇತ್ರದ ಮತದಾರರು ಪ್ರಿಯಾಂಕಾ ಅವರಿಗೆ ಒಳ್ಳೆಯ ಅವಕಾಶ ನೀಡಿದ್ದು, ಕ್ಷೇತ್ರದ ಜನತೆಯ ನಿರೀಕ್ಷೆ ತಕ್ಕಂತೆ ನಾವು ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.