ಭುವನೇಶ್ವರ : ಮಂಗಳವಾರ ನಡೆದ 147 ಸದಸ್ಯ ಬಲದ ಒಡಿಶಾ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಒಡಿಶಾ ವಿಧಾನಸಭೆಯಲ್ಲಿ 78 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬಹುಮತ ಪಡೆದಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

2000 ದಿಂದ ಒಡಿಶಾದಲ್ಲಿ ಅಧಿಕಾರದಲ್ಲಿರುವ ಬಿಜೆಡಿಯು 50 ಸ್ಥಾನಗಳನ್ನು ಗೆದ್ದಿದ್ದು, ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 14 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ.
ಒಡಿಶಾ, ಸಾಂಪ್ರದಾಯಿಕವಾಗಿ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರ ಪಕ್ಷವಾದ ಬಿಜು ಜನತಾದಳ (BJD)ದ ಭದ್ರಕೋಟೆಯಾಗಿದ್ದು, ಬಿಜೆಪಿಯು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಗಮನಾರ್ಹ ಲಾಭಪಡೆದಿದೆ.
ಒಡಿಶಾ ವಿಧಾನಸಭಾ ಚುನಾವಣೆಗೆ ಲೋಕಸಭೆ ಚುನಾವಣೆಯೊಂದಿಗೆ ಮೇ 13 ರಿಂದ ಜೂನ್ 1 ರವರೆಗೆ ನಾಲ್ಕು ಹಂತಗಳಲ್ಲಿ ಮತದಾನವನ್ನು ನಡೆಸಲಾಯಿತು. ಚುನಾವಣಾ ಕಣದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳೆಂದರೆ ಬಿಜು ಜನತಾ ದಳ 147 ಸ್ಥಾನಗಳಲ್ಲಿ, ಭಾರತೀಯ ಜನತಾ ಪಕ್ಷ 147 ಸ್ಥಾನಗಳಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 145 ಸ್ಥಾನಗಳಲ್ಲಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) 7 ಸ್ಥಾನಗಳಲ್ಲಿ ಸ್ಪರ್ಧಿಸಿದೆ.

2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ 113 ಸ್ಥಾನಗಳನ್ನು ಗೆದ್ದುಕೊಂಡಿತ್ತು, ಬಿಜೆಪಿ 23 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 9 ಸ್ಥಾನಗಳನ್ನು ಪಡೆದಿತ್ತು. ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಿ ರಾಜ್ಯ ಸರ್ಕಾರವನ್ನು ರಚಿಸಿದರು. ನವೀನ್‌ ಪಟ್ನಾಯಕ್ ಅವರು 24 ವರ್ಷಗಳಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.. ಅವರು ಮತ್ತೊಂದು ಅವಧಿಯನ್ನು ಭದ್ರಪಡಿಸಿಕೊಂಡರೆ, ಅವರು ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರನ್ನು ಹಿಂದಿಕ್ಕಿ ಭಾರತದ ಅತ್ಯಂತ ದೀರ್ಘಾವಧಿಯ ರಾಜ್ಯ ಮುಖ್ಯಮಂತ್ರಿಯಾಗುತ್ತಾರೆ.