ಬೆಳಗಾವಿಯಲ್ಲಿ ಈ ಬಾರಿ ಅತಿ ದೊಡ್ಡ ಬೇಟೆಯಾಡಲು ಕಾಂಗ್ರೆಸ್ ಮರಿ ಸಿಂಹ ಸಜ್ಜಾಗಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ಜಗದೀಶ ಶೆಟ್ಟರ್ ಬಿಜೆಪಿಯ ಅತ್ಯಂತ ದೊಡ್ಡ ನಾಯಕರು. ಅದರಲ್ಲೂ ರಾಜ್ಯಮಟ್ಟದ ಪ್ರಭಾವಿ ಜನನಾಯಕರು. ಸಚಿವರಿಂದ ಹಿಡಿದು ಮುಖ್ಯಮಂತ್ರಿ ಹುದ್ದೆವರೆಗೂ ಏರಿದ ಘಟಾನುಘಟಿ ರಾಜಕಾರಣಿ. ಅವರನ್ನು ಎದುರಿಸಲು ಕಾಂಗ್ರೆಸ್ ಪಕ್ಷದಿಂದ ಮೃಣಾಲ್‌ ಹೆಬ್ಬಾಳ್ಕರ್ ಸಜ್ಜಾಗಿದ್ದು ಮರಿ ಸಿಂಹ ದೊಡ್ಡ ಬೇಟೆಯಾಡಲು ಮುಂದಾಗಿದೆ ಎನ್ನುವುದು ಹೆಬ್ಬಾಳ್ಕರ್ ಅಭಿಮಾನಿಗಳ ಮನದ ಮಾತು.

ಬೆಳಗಾವಿ : ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆದರೆ, ಸದ್ಯಕ್ಕೆ ಕಂಡು ಬಂದ ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ ಪಾಲಿಗೆ ವರವಾಗಿ ಪರಿಣಮಿಸಿದ್ದು ಕಾಂಗ್ರೆಸ್ ಅಭೂತಪೂರ್ವ ಮುನ್ನಡೆಯತ್ತ ದಾಪುಗಾಲು ಹಾಕುತ್ತಿದೆ.
ಸದ್ಯಕ್ಕೆ ಕಂಡು ಬಂದ ಎಲ್ಲಾ ಸಮೀಕ್ಷೆಗಳು ಕೈ ಪರವಾಗಿದ್ದು ಬಿಜೆಪಿ ಆದರೆ ಹಿಂದೆ ಇರುವುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ವಶಪಡಿಸಿಕೊಳ್ಳಲಿರುವ ಕೆಲಕ್ಷೇತ್ರಗಳಲ್ಲಿ ಬೆಳಗಾವಿ ಒಳಗೊಂಡಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಸಮೀಕ್ಷೆಗಳು ಬೆಳಗಾವಿಯನ್ನು ಕೈ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.

ಬೆಳಗಾವಿಯ ಎಲ್ಲಾ ವಿಧಾನಸಭಾ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಬಹುದೊಡ್ಡ ಅಲೆ ಸೃಷ್ಟಿಯಾಗಿದೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿ ರೂಪುಗೊಂಡಿರುವುದು ಗತ ಇತಿಹಾಸ. ಅದರ ಜೊತೆಗೆ ಇದೀಗ ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೈಲಹೊಂಗಲ, ರಾಮದುರ್ಗ, ಗೋಕಾಕ, ಅರಬಾವಿ, ಸವದತ್ತಿ ಮತಕ್ಷೇತ್ರಗಳಲ್ಲೂ ಕಾಂಗ್ರೆಸ್ ಕಿಲಕಿಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲು ಅನುಭವಿಸಿದ್ದರು. ಆ ಸೋಲನ್ನು ಮರೆಯದ ಅವರು ಇದೀಗ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಗೆದ್ದೇ ಗೆಲ್ಲಬೇಕು ಎಂಬ ಛಲದಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಇಡೀ ಮತಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಈ ಬಾರಿ ಮಗನನ್ನು ಗೆಲ್ಲಿಸಿಯೇ ತೀರುವ ತವಕದಲ್ಲಿದ್ದಾರೆ. ಬೆಳಗಾವಿಯ ಸಂಪೂರ್ಣ ಸಮಗ್ರ ಮಾಹಿತಿಯನ್ನು ಇಂಚಿಂಚು ಸಂಗ್ರಹಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಮಗನ ಗೆಲುವಿಗೆ ಯಾವ ರಣತಂತ್ರ ಹೂಡಬೇಕು ಎನ್ನುವುದನ್ನು ಮುಂಚಿತವಾಗಿ ಅರ್ಥ ಮಾಡಿಕೊಂಡಿದ್ದು ಈ ಬಾರಿ ಅವರ ಹಂಚಿಕೆ ಯಾವ ಕಾರಣಕ್ಕೂ ಕೈ ಕೊಡದು. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ತಮ್ಮ ಪುತ್ರರಾಗಿರುವ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಅತ್ಯಂತ ಪರಿಣತ ಮತ್ತು ಪ್ರಬುದ್ಧ ರಾಜಕಾರಣಿಯನ್ನಾಗಿ ರೂಪುಗೊಳಿಸಿರುವ ಹೆಬ್ಬಾಳ್ಕರ್ ಅವರು ಚೊಚ್ಚಲ ಪ್ರಯತ್ನದಲ್ಲೇ ಮಗನನ್ನು ಲೋಕಸಭೆಗೆ ಕಳಿಸುವ ಲೆಕ್ಕಾಚಾರದಲ್ಲಿ ಫೇಲ್ ಆಗುವ ಸಾಧ್ಯತೆ ಇಲ್ಲ.

ಮೃಣಾಲ್‌ ಹೆಬ್ಬಾಳ್ಕರ್ ಅವರು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಪ್ರತಿಯೊಂದು ಸಮಸ್ಯೆಯನ್ನು ಗಾಢವಾಗಿ ಅರಿತಿದ್ದು ಅವುಗಳನ್ನು ಮತದಾರರ ಮುಂದೆ ಪ್ರಬುದ್ಧವಾಗಿ ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಅವರು ಮಾತನಾಡಿರುವ ಹಲವರು ದೃಷ್ಣಾಂತಗಳನ್ನು ನೀಡಬಹುದು. ಬೆಳಗಾವಿಯ ವಕೀಲರ ಸಭಾಭವನ ಹಾಗೂ ಮಹಾಂತೇಶ ನಗರದಲ್ಲಿ ಅವರು ಮಾತನಾಡಿರುವ ಭಾಷಣಗಳು ಮತದಾರರ ಮನ ತಟ್ಟಿವೆ. ಬೆಳಗಾವಿಗೆ ಯಾವ ರೀತಿಯಲ್ಲಿ ಹಂತ ಹಂತವಾಗಿ ಅನ್ಯಾಯವಾಗಿದೆ ಎನ್ನುವುದನ್ನು ಮನವರಿಕೆ ಆಗುವ ರೀತಿಯಲ್ಲಿ ಅವರು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ರಾಜ್ಯದ ಮುಖ್ಯಮಂತ್ರಿ ಹುದ್ದೆಯವರೆಗೂ ಏರಿರುವ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಈ ಸಲ ಬೆಳಗಾವಿಯಲ್ಲಿ ಇನ್ನಿಲ್ಲದಂತೆ ಮುಖಭಂಗವಾಗುವ ಸಾಧ್ಯತೆಯನ್ನು ಸದ್ಯದ ಚುನಾವಣಾ ಲೆಕ್ಕಾಚಾರ ಬಹಿರಂಗಪಡಿಸುತ್ತಿದೆ. ಜಗದೀಶ ಶೆಟ್ಟರ್ ಹೊರಗಿನವರು ಎಂಬ ಕಾಂಗ್ರೆಸ್ ನವರ ಪ್ರಚಾರದಿಂದಾಗಿ ಶೆಟ್ಟರ್ ಅವರಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಜೊತೆಗೆ ಬೆಳಗಾವಿಗೆ ಹೈಕೋರ್ಟ್ ಪೀಠ, ಐಐಟಿ ಬಾರದೇ ಇರುವ ಹಿಂದೆ ಜಗದೀಶ ಶೆಟ್ಟರ್ ಅವರ ಕೈವಾಡವನ್ನು ಕಾಂಗ್ರೆಸ್ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಬಿಂಬಿಸುತ್ತಿರುವುದು ಬಿಜೆಪಿ ಅಭ್ಯರ್ಥಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಇದೆಲ್ಲ ಅಂಶಗಳು ಬೆಳಗಾವಿಯ ಅಷ್ಟು ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿಗೆ ದುಬಾರಿಯಾಗುವ ಸಾಧ್ಯತೆ ಇದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳು ಮತದಾರರ ಮನ ಮುಟ್ಟಿವೆ‌. ಜೊತೆಗೆ ಬಿಜೆಪಿ ಅಭ್ಯರ್ಥಿ ಹೊರಗಿನವರು ಎಂಬ ಕಾಂಗ್ರೆಸ್ ಪಕ್ಷದ ಪ್ರಚಾರದಿಂದ ಈ ಬಾರಿ ಕಮಲ ಪಕ್ಷ ಸುಲಭ ಸಾಧ್ಯವಾಗಿ ಬೆಳಗಾವಿಯನ್ನು ಕಳೆದುಕೊಳ್ಳುವುದರಲ್ಲಿ ಯಾವ ಸಂದೇಹವು ಇಲ್ಲ, ಜೊತೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಜಗದೀಶ್ ಶೆಟ್ಟರ್ ಅವರಿಗೆ ಹೆಗಲಿಗೆ ಹೆಗಲುಕೊಟ್ಟು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿಲ್ಲ. ಇವೆಲ್ಲ ಅಂಶಗಳು ಸಮೀಕ್ಷೆಯಲ್ಲಿ ಕಮಲ ಪಕ್ಷಕ್ಕೆ ಆತಂಕ ತಂದು ಕೊಟ್ಟಿವೆ.

ಕಾಂಗ್ರೆಸ್ ಗೆಲುವಿಗೆ ಜಿಲ್ಲೆಯ ಎಲ್ಲಾ ಶಾಸಕರು ಪಣತೊಟ್ಟಿದ್ದು ಪ್ರಧಾನವಾಗಿ ಕಂಡುಬರುತ್ತಿದೆ. ಜೊತೆಗೆ ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರಂತಹ ಯುವ ಮುಖಗಳಿಗೆ ಮತ್ತು ವಿದ್ಯಾವಂತರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಪಾಲಿಗೆ ಪ್ಲಸ್ ಆಗಿದೆ‌.

ಸಮೀಕ್ಷೆಗಳ ಪ್ರಕಾರ ಇದೀಗ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕೈ ಜಯಭೇರಿ ಬಾರಿಸುವ ಎಲ್ಲಾ ಸಾಧ್ಯತೆಗಳನ್ನು ಸೃಷ್ಟಿಸಿದೆ. ಎಲ್ಲಾ ವಿಧಾನಸಭಾ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾಗಿ ಜನ ಉತ್ಸಾಹ ತೋರುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಒಟ್ಟಾರೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಯಾವ ಅನುಮಾನವೂ ಇಲ್ಲ ಎನ್ನುವುದು ಮತದಾರ ಪ್ರಭುಗಳ ಇಂಗಿತವಾಗಿದೆ.