ಗೋಕಾಕ: ಗ್ರಾಮಸ್ಥರೆಲ್ಲರೂ ಸೇರಿಕೊಂಡು ಒಗ್ಗಟ್ಟಿನಿಂದ ಮಹರ್ಷಿ ಭಗೀರಥ ದೇವಸ್ಥಾನ ಮತ್ತು ಸಮುದಾಯ ಭವನವನ್ನು ನಿರ್ಮಿಸಿರುವುದು ಪ್ರಶಂಸನೀಯ ಎಂದು ಅರಭಾವಿ ಶಾಸಕ ಮತ್ತು ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಬಿಲಕುಂದಿ ಗ್ರಾಮಸ್ಥರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಿಲಕುಂದಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಹರ್ಷಿ ಭಗೀರಥ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸಮುದಾಯ ಭವನದಲ್ಲಿ ಗ್ರಾಮಸ್ಥರು ನೀಡಿದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಭಗೀರಥ ಸಮಾಜ ಬಾಂಧವರು ಒಂದಾಗಿ ಸಾರ್ವಜನಿಕ ವಂತಿಗೆ ಮೂಲಕ ಒಟ್ಟು 40 ಲಕ್ಷ ರೂ. ಗಳನ್ನು ಸಂಗ್ರಹಿಸಿ, ಅದರಲ್ಲಿ ದೇವಸ್ಥಾನ ಹಾಗೂ ಸಮುದಾಯ ಭವನ ನಿರ್ಮಿಸಿರುವುದು ಸ್ತುತ್ಯಾರ್ಹ ಎಂದು ತಿಳಿಸಿದರು.
ಗ್ರಾಮದಲ್ಲಿ ಸಾಮಾಜಿಕ, ಧಾರ್ಮಿಕ, ಮದುವೆ ಮುಂತಾದ ವಿಧಾಯಕ ಕಾರ್ಯಕ್ರಮಗಳನ್ನು ನೆರವೇರಿಸಲು ಸಮುದಾಯ ಭವನ ಅನುಕೂಲವಾಗಲಿದೆ. ಭಗೀರಥ ಉಪ್ಪಾರ ಸಮಾಜವು ಎಲ್ಲ ರಂಗಗಳಲ್ಲಿ ಮುಂದೆ ಬರಬೇಕಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟರೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದು ಹೇಳಿದರು.
ಈ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ರಾಮೇಶ್ವರ ಏತ ನೀರಾವರಿ ಯೋಜನೆ ಕಾರ್ಯಗತವಾಗಿದೆ. ಜತೆಗೆ ಕಾಲುವೆ ಮೂಲಕ ನೀರು ಹರಿದು ಬರುತ್ತಿದೆ. ರೈತರ ಅನುಕೂಲತೆಗಳ ತಕ್ಕಂತೆ ನೀರು ಬಿಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ನೀರಿನ ಕೊರತೆ ಎದುರಾಗದಂತೆ ಅಗತ್ಯವಿರುವ ಕ್ರಮಗಳನ್ನು ಕೈಕೊಳ್ಳುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಭರವಸೆ ನೀಡಿದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಬಸು ಕಪರಟ್ಟಿ, ಗೋಸಬಾಳ ಗ್ರಾ. ಪಂ. ಅಧ್ಯಕ್ಷ ಬಸವರಾಜ ಸವದತ್ತಿ, ಸದಸ್ಯರಾದ ಶಿವಾಜಿ ಬಳಿಗಾರ, ಮಹಾದೇವಿ ಹಿರೇಮಠ, ಶಿಲ್ಪಾ ಕಳ್ಳಿಗುದ್ದಿ, ಬಸು ಸವದತ್ತಿ, ಮುಖಂಡರಾದ ಮಹಾದೇವ ಹೊಸತೋಟ, ರಮೇಶ ಇಟ್ನಾಳ, ಕೃಷ್ಣಪ್ಪ ಕಪರಟ್ಟಿ, ಯಲ್ಲಪ್ಪ ಸವದತ್ತಿ, ಗುರಪ್ಪ ಕಂಕಣವಾಡಿ, ಗುರುಸಿದ್ಧಯ್ಯ ಹಿರೇಮಠ, ಶಿವಪ್ಪ ಮದಿಹಳ್ಳಿ, ಪ್ರಕಾಶ ಜೋತಿನವರ, ಅರ್ಜುನ ಬಂಗಾರಿ, ಶಂಕರೆಪ್ಪ ಸವದತ್ತಿ, ಬಸವರಾಜ ಭಂಗಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.