ಬೆಳಗಾವಿ ಸುವರ್ಣ ಸೌಧ : ರಾಜ್ಯದಲ್ಲಿ ಅಡಿಕೆ ಬೆಳೆಯಲ್ಲಿ ಕಂಡು ಬರುತ್ತಿರುವ ಎಲೆ ಚುಕ್ಕಿ ರೋಗ ನಿಯಂತ್ರಣ ಕುರಿತಂತೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಸಂಶೋಧನೆ ಕೈಗೊಳ್ಳಲು 43.61 ಲಕ್ಷ ರೂ ಗಳ ಅನುದಾನವನ್ನು ಒದಗಿಸಲಾಗಿದ್ದು, ಈ ರೋಗ ನಿಯಂತ್ರಣ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಮಂಗಳವಾರ ವಿಧನ ಪರಿಷತ್‌ನಲ್ಲಿ ಸದಸ್ಯ ಎಸ್. ರುದ್ರೇಗೌಡ ಅವರ ಚುಕ್ಕೆ ಗುರಿತಿನ ಪ್ರಶ್ನೆ 180 ಕ್ಕೆ , ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರ ಪರವಾಗಿ ಅವರು ಉತ್ತರಿಸಿದರು.
ಪ್ರಸಕ್ತ ಸಾಲಿನಲ್ಲಿ ಎಲೆಚುಕ್ಕಿ ರೋಗ ಭಾಧಿತ ರೈತರಿಗೆ ಪ್ರತಿ ಹೆಕ್ಟೇರ್ ಗೆ 4000 ದಂತೆ ಗರಿಷ್ಠ 1.5 ಹೆಕ್ಟೆರ್ ವರೆಗೆ ಮಿತಿಗೊಳಿಸಿ ಪ್ರತಿ ಫಲಾನುಭವಿಗೆ ಗರಿಷ್ಠ 6000 ಗಳ ಮೊತ್ತದ ಸಸ್ಯ ಸಂರಕ್ಷಣಾ ಔಷಧಿಗಳನ್ನು ವಿತರಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 6250 ಹೆಕ್ಟೆರ್ ಪ್ರದೇಶಕ್ಕೆ ಒಟ್ಟು 250 ಲಕ್ಷ ರೂ ಅನುದಾನ ವಿನಿಯೋಗಿಸಲಿಗಿದೆ ಎಂದರು.
ರಾಜ್ಯದಲ್ಲಿ ಅಡಿಕೆ ಬೆಳೆಯುವ ಜಿಲ್ಲೆಗಳಲ್ಲಿ ಒಟ್ಟು 53977 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿರುವುದನ್ನು ಅಂದಾಜಿಸಲಾಗಿದ್ದು ಅದರ ನಿಯಂತ್ರಣ ಹಾಗೂ ಸಂಶೋಧನೆಗಾಗಿ 21.50 ಕೋಟಿ ರೂಗಳ ಅನುದಾನದ ಅವಶ್ಯಕತೆಯಿದ್ದು ಹೆಚ್ಚುವರಿ ಅನುದಾನದಕ್ಕಾಗಿ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ ಎಂದರು.