ಉಡುಪಿ: ಮಳೆಯಿಂದ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಉಡುಪಿ ಜಿಲ್ಲಾಡಳಿತ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಅಧಿಕಾರಗಳೊಂದಿಗೆ ಭಾನುವಾರ ಭೇಟಿ ನೀಡಿದ ಸಚಿವರು, ಮಳೆ ಹಾನಿಯಿಂದ ಆದ ನಷ್ಟದ ಕುರಿತು ಮಾಹಿತಿ ಪಡೆದುಕೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿಧಾನ ಮಂಡಲ ಅಧಿವೇಶನ ನಡೀತಾ ಇದೆ. ಮಳೆ ಪರಿಸ್ಥಿತಿ ಕುರಿತು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಭಾನುವಾರ ರಜೆ ಇದ್ದರೂ ಪರಿಶೀಲನೆ ಮಾಡಲು ಬಂದಿರುವೆ ಎಂದರು.

ನನ್ನ ಅವಶ್ಯಕತೆ ಇದ್ದಾಗ ಇಲ್ಲಿಗೆ ಬರುತ್ತೇನೆ. ದಿನದ 24 ಗಂಟೆಯೂ ಜಿಲ್ಲಾಡಳಿತ, ಸರ್ಕಾರ ಎಚ್ಚರವಾಗಿವೆ. ಎಲ್ಲೂ ಯಾವ ತೊಂದರೆ ಆಗಬಾರದು. ಪ್ರಾಣ ಹಾನಿ ಆಗಬಾರದು ಎಂದು ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

25 ದಿನಗಳ ಹಿಂದೆಯೇ ಜಿಲ್ಲಾ ಮಟ್ಟದ ಮುಂಜಾಗ್ರತಾ ಸಭೆ ನಡೆಸಿದ್ದೆ. ಬೀಳುವ ಹಂತದಲ್ಲಿರುವ ಮರಗಳನ್ನು ಕಡಿಯುವಂತೆ ಸೂಚಿಸಿದ್ದೆ. ಹೀಗಾಗಿ ಅರಣ್ಯ ಇಲಾಖೆ ವತಿಯಿಂದ 500 ರಿಂದ 600 ಮರಗಳನ್ನು ತೆರವು ಮಾಡಲಾಗಿದೆ. ಶಾಲೆಯ ಪಕ್ಕ ಇರುವ ವಯರ್ ಗಳನ್ನು ತೆರವು ಮಾಡಲು ಮೆಸ್ಕಾಂನವರಿಗೆ ಈ ಮೊದಲೇ ಸೂಚನೆ ಕೊಟ್ಟಿದ್ದೇನೆ. ಅವರು ಕೂಡ ಅಪಾಯ ಇರುವಲ್ಲಿ ತೆರವು ಮಾಡಿದ್ದಾರೆ ಎಂದರು.

ನಗರದಲ್ಲಿ ಚರಂಡಿಯಿಂದ ಸಮಸ್ಯೆ ಆಗಿತ್ತು, ಸ್ವಚ್ಛಗೊಳಿಸಿದ್ದಾರೆ. ಕಾಲು ಸಂಕಗಳ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಜಿಲ್ಲಾಡಳಿತದಿಂದ ಹೆಲ್ಪ್ ಲೈನ್ ತೆರೆಯಲಾಗಿದೆ. ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡುವ ವಿಚಾರದಲ್ಲಿ ಯಾವುದೇ ತಾರತಮ್ಯ ಆಗಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟ ಪಡಿಸಿದರು.

ಈ ವೇಳೆ ಬೈಂದೂರು ಮಾಜಿ ಶಾಸಕ ಗೋಪಾಲ್ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಲ್, ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ಎಸ್.ಆರ್. ರಶ್ಮಿ, ಡಿಎಫ್ ಒ ಗಣಪತಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

* *ಅಧಿಕಾರಿಗಳೊಂದಿಗೆ ಸಭೆ*
ಬಳಿಕ ಗೃಹ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಯಲ್ ಜೊತೆ ಸಭೆ ನಡೆಸಿ, ಹೆಚ್ಚಿನ ಮಾಹಿತಿ ಪಡೆದು ಕೊಂಡರು.

*ಹಟ್ಟಿಯಂಗಡಿ ದೇವಸ್ಥಾನಕ್ಕೆ ಭೇಟಿ*
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ , ಸಚಿವರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸತ್ಕರಿಸಲಾಯಿತು.