ಬೆಳಗಾವಿ ಸುವರ್ಣಸೌಧ : ರಾಜ್ಯದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ರೂಪಿಸಿರುವ ನಿಯಮಗಳಲ್ಲಿನ ತಾರತಮ್ಯಗಳ ಬಗ್ಗೆ ಬೆಳಗಾವಿಯ ಚಳಿಗಾಲದ ಅಧಿವೇಶನ ಮುಗಿಯುವ ಒಳಗೆ ವಿಶೇಷ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.

ಅವರು ಇಂದು ವಿಧಾನಪರಿಷತ್‌ನಲ್ಲಿ ಸದಸ್ಯ ಮರಿತಿಬ್ಬೇಗೌಡ ಅವರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ನೀಡುವಲ್ಲಿ ಒಂದು ನಿಯಮ, ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ನೀಡುವಲ್ಲಿ ಮತ್ತೊಂದು ನಿಯಮ ರೂಪಿಸಿ ತಾರತಮ್ಯ ಉಂಟು ಮಾಡಿರುವ ಗಂಭೀರ ಸಮಸ್ಯೆ ಕುರಿತ ಗಮನ ಸೆಳಯುವ ಸೂಚನೆಗೆ ಉತ್ತರಿಸಿ ಮಾತನಾಡಿದರು.
ಪ್ರಸ್ತುತ ಪ್ರೌಢಶಾಲಾ ಸಹ ಶಿಕ್ಷಕರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ಹೊಂದಲು ಪ್ರೌಢಶಾಲಾ ಸಹ ಶಿಕ್ಷಕರಾಗಿ 10 ವರ್ಷಗಳ ಅರ್ಹತಾದಾಯಕ ಸೇವೆಯನ್ನು ಪೂರೈಸಿರಬೇಕು, ಒಂದು ವೇಳೆ 10 ವರ್ಷ ಪೂರೈಸಿರುವವರು ಲಭ್ಯವಿಲ್ಲದಿದ್ದಲ್ಲಿ 7 ವರ್ಷ ಸೇವೆ ಪೂರೈಸಿರುವವರನ್ನು ಬಡ್ತಿಗೆ ಪರಿಗಣಿಸಲಾಗುವುದು.
ಪ್ರಸ್ತುತ ಚಾಲ್ತಿಯಲ್ಲಿರುವ 2014 ರ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಉಪನ್ಯಾಸಕ ವೃಂದದಲ್ಲಿ ನೇರ ನೇಮಕಾತಿಗೆ ಶೇ.74 ಮತ್ತು ಶೇ.1 ರಷ್ಟು ಸೇವಾ ನಿರತ ಸಿ ಗುಂಪಿನ ನೌಕರರಿಗೆ ಹಾಗೂ ಶೆ.25 ರಷ್ಟು ಸೇವಾ ನಿರತ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಅರ್ಹತಾದಾಯಕ ಪರೀಕ್ಷೆ ಉತ್ತೀರ್ಣರಾಗುವ ಷರತ್ತಿನಂತೆ ಅನುಪಾತವನ್ನು ಹಂಚಿಕೆ ಮಾಡಿ ಬಡ್ತಿ ಕಲ್ಪಿಸಲಾಗಿದೆ ಎಂದರು.
2014 ರ ವೃಂದ ಮತ್ತು ನೇಮಕಾತಿ ನಿಯಮಗಳು ಹಾಗೂ ಅರ್ಹತದಾಯಕ ಪರೀಕ್ಷೆ ಉತೀರ್ಣರಾಗಬೇಕು ಎಂಬ ಷರತ್ತುಗಳ ಕಾರಣ ಕಳೆದ 9 ವರ್ಷಗಳಿಂದ ಯಾವುದೇ ಪ್ರೌಢಶಾಲಾ ಸಹ ಶಿಕ್ಷಕರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ಹೊಂದಲು ಸಾಧ್ಯವಾಗಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವಾಗ ಶೇ.50ರಷ್ಟು ನೇರ ನೇಮಕಾತಿ ಮತ್ತು ಶೇ.50ರಷ್ಟು ಸೇವಾ ನಿರತರಿಗೆ ನಿಗಧಿಪಡಿಸಿದ್ದು, ಯಾವುದೇ ಅರ್ಹತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿಲ್ಲ. ಒಂದೇ ಇಲಾಖೆಯಲ್ಲಿ ಬಡ್ತಿಗಾಗಿ ಈ ರೀತಿಯಾಗಿ ತಾರತಮ್ಯ ಇರುವುದರಿಂದ ಇದನ್ನು ಸರಿಪಡಿಸುವಂತೆ ಶಾಸಕ ಮರಿತಿಬ್ಬೇಗೌಡ ಅವರಿಗೆ ಪೂರಕವಾಗಿ ಸದಸ್ಯರಾದ ನಾರಾಯಣ ಸ್ವಾಮಿ,ಶಶೀಲ್ ನಮೋಶಿ, ಭೋಜೇಗೌಡ, ಸಂಕನೂರ್ ಹಾಗೂ ತೇಜಸ್ವಿನಿ ಗೌಡ ಮಾತನಾಡಿದರು.
ಈ ಸಮಸ್ಯೆಯ ಕುರಿತಂತೆ ಶಿಕ್ಷಕರೂ ಕೂಡಾ ತಮ್ಮ ಗಮನಕ್ಕೆ ತಂದಿದ್ದು, ಈ ಬಗ್ಗೆ ಪ್ರಸಕ್ತ ಅಧಿವೇಶನ ಮುಗಿಯುವ ಒಳಗೆ, ಅಗತ್ಯ ಬದಲಾವಣೆಗಳ ಬಗ್ಗೆ ವಿಶೇಷ ಸಭೆ ಕರೆದು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.