ಗೋಕಾಕ:
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ದೇಶದ ಆರ್ಥಿಕ ರಂಗಕ್ಕೆ ಆಧಾರಸ್ತಂಭವಾಗಿರುವ ಒಟ್ಟು ಆರು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೃಷಿ, ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ, ಸಾರಿಗೆ, ಆರೋಗ್ಯ ಮತ್ತು
ವಸತಿ ಕ್ಷೇತ್ರಗಳತ್ತ ಹೆಚ್ಚು ಗಮನ ಕೇಂದ್ರಿಕರಿಸಿದ್ದಾರೆ. ಮಾತ್ರವಲ್ಲ, ಹೊಸ ಉದ್ಯೋಗ ಸೃಷ್ಟಿ, ಸಂಶೋಧನೆ, ಆವಿಷ್ಕಾರಕ್ಕೂ ಒತ್ತು ನೀಡಿದ್ದಾರೆ. ದೇಶದ ಬೆನ್ನೆಲುಬಾದ ರೈತರಿಗೆ ಡೈರಿ ಉದ್ಯಮದಲ್ಲಿರುವ ರೈತರಿಗೆ ನೆರವು, ರಾಸುಗಳಿಗೆ ಕಂಡುಬರುವ ಕಾಲುಬಾಯಿ ರೋಗ ತಡೆಗೆ ಕ್ರಮ, 4 ಕೋಟಿ ರೈತರಿಗೆ ಬೆಳೆ ವಿಮೆ ಯೋಜನೆಯಂತಹ ಯೋಜನೆಗಳು ಮೆಚ್ಚುವಂತದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ಜತೆಗೆ ದೇಶದಲ್ಲಿರುವ ಪ್ರಮುಖ ಪ್ರವಾಸೋದ್ಯಮಗಳ ಅಭಿವೃದ್ಧಿಗೆ ಶೂನ್ಯ ಬಡ್ಡಿ ಸಾಲ ನೀಡುತ್ತಿರುವುದು ಕೂಡ ಪರೋಕ್ಷವಾಗಿ ಲಕ್ಷಾಂತರ ಉದ್ಯೋಗಗಳ ಸೃಷ್ಟಿಗೂ ಕಾರಣವಾಗಿದೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ತರುವ ಉದ್ದೇಶ ಹೊಂದಿದೆ. ಇ ವಾಹನಗಳಿಗೆ ಚಾರ್ಜಿಂಗ್‌ ಸ್ಟೇಷನ್‌ ಹೆಚ್ಚಿಸುವುದು, ದೇಶದ ನಾನಾ ನಗರಗಳಿಗೆ ಮೆಟ್ರೋ ರೈಲು ಮಾರ್ಗ ವಿಸ್ತರಣೆ, ಸಣ್ಣ ನಗರಿಗಳಿಗೂ ಉಡಾನ್‌ ಯೋಜನೆಯಡಿ 517 ಹೊಸ ಮಾರ್ಗಗಳನ್ನು ರೂಪಿಸುತ್ತಿರುವುದು ದೇಶದ ಆರ್ಥಿಕತೆಯನ್ನು
ಪರೋಕ್ಷವಾಗಿ ಗಟ್ಟಿಗೊಳಿಸುವತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ
ಇಟ್ಟಿರುವುದು ಇದರಿಂದ ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ನವಭಾರತದ ಪರಿಕಲ್ಪನೆಯ ಸಾಕಾರದ ನಿಟ್ಟಿನಲ್ಲಿ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ, ರಾಷ್ಟ್ರದ ಪ್ರಗತಿನಿಷ್ಠ ಬಜೆಟ್
ಇದಾಗಿದೆ. ಚುನಾವಣೆ ಪೂರ್ವ ಜನಪ್ರಿಯ ಘೋಷಣೆಗಳನ್ನು ಮಂಡಿಸದೆ, ಯುವಜನತೆ, ರೈತರು, ಮಹಿಳೆಯರು ಮತ್ತು ವಿಶೇಷವಾಗಿ ದುರ್ಬಲ ವರ್ಗದ ಜನರ ಜೀವನಮಟ್ಟ ಸುಧಾರಿಸುವ, ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ ವಾಸ್ತವದ ಆಯವ್ಯಯವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ ಎಂದು
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.