ಬೆಳಗಾವಿ :
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್ ಅತ್ಯಂತ ಆಶಾದಾಯಕ ಮತ್ತು ಎಂದು ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಬಣ್ಣಿಸಿದ್ದಾರೆ.

ಆಶಾ ಕಾರ್ಯಕರ್ತರ ಮನವಿಗೆ ನಿರ್ಮಲಾ ಸೀತಾರಾಮನ್ ಸ್ಪಂದಿಸಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಇನ್ನಷ್ಟು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಅನೇಕ ಪರಿಣಾಮಕಾರಿ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ.

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ 9ರಿಂದ 14 ವಯಸ್ಸಿನ ಬಾಲಕಿಯರಿಗೂ ಲಸಿಕೆ ನೀಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಳೆದ ತಿಂಗಳು ಕೇಂದ್ರ ಆರೋಗ್ಯ ಸಚಿವಾಲಯವು, ಗರ್ಭಕಂಠದ ಕ್ಯಾನ್ಸರ್‌ ಕುರಿತು ಸೂಕ್ಷ್ಮವಾಗಿ ಗಮನಹರಿಸಲಾಗುತ್ತಿದೆ. ಎಲ್ಲಾ ರಾಜ್ಯ ಮತ್ತು ಆರೋಗ್ಯ ಇಲಾಖೆಯೊಂದಿಗ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿತ್ತು.

ಪ್ರಸ್ತುತ, ಭಾರತದ ಸೀರಮ್‌ ಇನ್‌ಸ್ಟಿಟ್ಯೂಟ್‌ ತಯಾರಿಸಿದ CERVAVAC ಲಸಿಕೆ ಖಾಸಗಿಯಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಇದರ ಬೆಲೆ ಒಂದು ಡೋಸ್‌ಗೆ ₹2 ಸಾವಿರ ಆಗಿದೆ. ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಜಾಗತಿಕ ಮಟ್ಟಕ್ಕೆ ಹೋಲಿಸಿದಲ್ಲಿ ಭಾರತದಲ್ಲಿ ತುಸು ಹೆಚ್ಚು. ಗರ್ಭಕಂಠ ಕ್ಯಾನ್ಸರ್‌ನಿಂದ ಸಾವು ಸಂಭವಿಸುವ ಪ್ರಮಾಣ ಜಾಗತಿಕ ಮಟ್ಟದಲ್ಲಿ ಶೇ 1ರಷ್ಟಿದ್ದರೆ, ಭಾರತದಲ್ಲಿ ಅದು ಶೇ 1.6ರಷ್ಟು.
ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 80 ಸಾವಿರ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ, 35 ಸಾವಿರ ಮಹಿಳೆಯರು ಇದರಿಂದ ಮೃತಪಡುತ್ತಿದ್ದಾರೆ. ಈ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗಮನಹರಿಸಿರುವುದು ಮಹಿಳೆಯರ ಪರವಾದ ನರೇಂದ್ರ ಮೋದಿ ಸರಕಾರದ ಜನಪರ ನಿಲುವಿಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.