ಬೆಳಗಾವಿ : ಬೆಳಗಾವಿಯಲ್ಲಿ ಹಾಲಿ ಸಂಸದೆ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ತಪ್ಪಿಸಿ ಅವಮಾನ ಮಾಡಿದ್ದಾರೆ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆರೋಪಿಸಿದರು.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿಎಸ್​ ಯಡಿಯೂರಪ್ಪ ಮತ್ತು ಈಶ್ವರಪ್ಪ ರಾಜ್ಯದಲ್ಲಿ ಬಿಜೆಪಿ ಬಲಪಡಿಸಿದರು. ಆದರೆ, ಈಶ್ವರಪ್ಪ ಮಗನಿಗೆ ಟಿಕೆಟ್ ನೀಡಲಿಲ್ಲ. ಜಗದೀಶ್​​ ಶೆಟ್ಟರ್‌ಗೆ ಮೊದಲು ಬಾಲ ಕಟ್ ಮಾಡಿದರು. ಈಗೀಗ ಜಗದೀಶ್​ ಶೆಟ್ಟರ್​ ಬಾಲ ಮತ್ತೆ ಚಿಗುರುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬಿಎಸ್​​ ಯಡಿಯೂರಪ್ಪ ಸಿಎಂ ಆಗಿದ್ದಾಗ ಅನುದಾನ ಕೇಳಿದ್ದೆ. ನನಗೆ ವಿಷ ಕುಡಿಯಲೂ ಹಣವಿಲ್ಲ, ನಿನಗೆ ಎಲ್ಲಿಂದ ಅನುದಾನ ಕೊಡಲಿ ಎಂದಿದ್ದರು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ಚುನಾವಣಾ ಕೆಲಸ ಅಥಣಿಯಿಂದ ಆರಂಭಿಸಿದರೆ ಗೆಲುವು ಸಿಗುತ್ತೆ ಎಂಬ ನಂಬಿಕೆ
ಎರಡು ದಿನಗಳ ಹಿಂದೆ ಸಚಿವರು ಪೂರ್ವಭಾವಿ ಸಭೆ ಮಾಡೋಣ. ಶಿವಯೋಗಿ ನಾಡು ಅಥಣಿಯಿಂದ ಪ್ರಚಾರ ಆರಂಭಿಸೋಣ ಎಂದು ಹೇಳಿದ್ದರು. ಯಾವುದೇ ಪಕ್ಷ ಮೊದಲ ಸಭೆ ಅಥಣಿಯಿಂದ ಆರಂಭಿಸಿದರೆ ಅವರಿಗೆ ಚುನಾವಣೆಯಲ್ಲಿ ಗೆಲುವು ಸಿಗುತ್ತೆ ಎನ್ನುವುದು ನಂಬಿಕೆ. ಈಶಾನ್ಯ ದಿಕ್ಕಿನಿಂದ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದರು.