ನವದೆಹಲಿ: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ಸುಂದರ ರಾಮಲಲ್ಲಾ ವಿಗ್ರಹವನ್ನು ಕೆತ್ತನೆ ಮಾಡಿ ವಿಶ್ವವಿಖ್ಯಾತಿ ಗಳಿಸಿದ್ದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಮತ್ತೆ ಸುದ್ದಿಯಲ್ಲಿದ್ದಾರೆ.

ಗರ್ಭಗುಡಿಯಲ್ಲಿರುವ ರಾಮಲಲ್ಲಾ ವಿಗ್ರಹದಂತೆಯೇ ಮತ್ತೊಂದು ಪುಟ್ಟ ವಿಗ್ರಹಕ್ಕೆ ಶಿಲ್ಪಿ ರೂಪ ನೀಡಿದ್ದಾರೆ. ರಾಮಲಲ್ಲಾನ ಚಿಕಣಿ ರೂಪವನ್ನು ಕೆತ್ತನೆ ಮಾಡಿ ಭಕ್ತರ ಮನಗೆದ್ದಿದ್ದಾರೆ. ರಾಮಲಲ್ಲಾನ ಮತ್ತೊಂದು ಪುಟ್ಟ ವಿಗ್ರಹ ಹಿಡಿದುಕೊಂಡಿರುವ ಫೋಟೊ ಈಗ ಎಲ್ಲೆಡೆ ವೈರಲ್‌ ಆಗಿದೆ.

ರಾಮಮಂದಿರ ಗರ್ಭಗುಡಿಗೆ ರಾಮಲಲ್ಲಾ ಮೂರ್ತಿಯನ್ನು ಆಯ್ಕೆ ಮಾಡಿದ ನಂತರ, ನಾನು ಅಯೋಧ್ಯೆಯಲ್ಲಿ ಬಿಡುವಿನ ವೇಳೆಯಲ್ಲಿ ಮತ್ತೊಂದು ಪುಟ್ಟ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ್ದೆ ಎಂದು ಎಕ್ಸ್‌ನಲ್ಲಿ ಅರುಣ್‌ ಯೋಗಿರಾಜ್‌ ಬರೆದುಕೊಂಡಿದ್ದಾರೆ. ಸಾಲುಗಳ ಜೊತೆ ಪುಟ್ಟ ವಿಗ್ರಹದ ಫೋಟೊವನ್ನು ಹಂಚಿಕೊಂಡಿದ್ದಾರೆ.

ಇದಕ್ಕೂ ಮೊದಲು ಶಿಲ್ಪಿ ಯೋಗಿರಾಜ್‌, ‘ಪ್ರತಿಮೆಯ ಕಣ್ಣುಗಳನ್ನು ಕೆತ್ತಲು ಬಳಸಿದ ವಿಶೇಷ ಸಾಧನಗಳ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ನಾನು ಅಯೋಧ್ಯೆಯ ರಾಮಲಲ್ಲಾನ ದಿವ್ಯ ಕಣ್ಣುಗಳನ್ನು (ನೆಟ್ರೋನ್ಮಿಲನ) ಕೆತ್ತಲು ಬಳಸಿದ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆ ಇದು’ ಎಂದು ಫೋಟೊ ಹಂಚಿಕೊಂಡಿದ್ದರು.

51 ಇಂಚಿನ ಎತ್ತರದ ಬಾಲಕ ರಾಮನ ವಿಗ್ರಹವನ್ನು ಕೃಷ್ಣ ಶಿಲೆಯಿಂದ ಅರುಣ್‌ ಯೋಗಿರಾಜ್‌ ಕೆತ್ತಿದ್ದರು. ಅದನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಲಕ್ಷಾಂತರ ಭಕ್ತರು ರಾಮಮಂದಿರಕ್ಕೆ ತೆರಳಿ ಭಗವಾನ್‌ ರಾಮನ ದರ್ಶನ ಪಡೆಯುತ್ತಿದ್ದಾರೆ.