ಯಾದಗಿರಿ : ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ತನ್ನ ಮಗಳು ತನ್ವಿ ಜೊತೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವ ಎಪಿಸೋಡ್‌ ಪ್ರಸಾರವಾಗುತ್ತಿದೆ. ಸದ್ಯ ಇದೇ ಮಾದರಿಯ ರಿಯಲ್ ಕಥೆಯೊಂದು ಯಾದಗಿರಿಯಲ್ಲಿ ಕಂಡು ಬಂದಿದೆ. ಆದರೆ ಇಲ್ಲಿ 32 ವರ್ಷದ ತಾಯಿ ತನ್ನ ಮಗನ ಜೊತೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಒಂದೇ ಪರೀಕ್ಷಾ ಕೇಂದ್ರದಲ್ಲಿ ತಾಯಿ-ಮಗ ಪರೀಕ್ಷೆ ಬರೆಯುತ್ತಿರುವ ಅಪರೂಪದ ಪ್ರಸಂಗ ನಡೆದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ತಾಯಿ ಗಂಗಮ್ಮ (32) ಹಾಗೂ ಆಕೆಯ ಮಗನ ಮಲ್ಲಿಕಾರ್ಜುನ ಒಂದೇ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ನನ್ನ ಮಗನೊಟ್ಟಿಗೆ ಬರೆಯುತ್ತಿರುವುದು ಸಂತಸ ತಂದಿದೆ ಎಂದು ಗಂಗಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಮಗ ಮಲ್ಲಿಕಾರ್ಜುನ ಇದೇ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದು, ಶಹಾಪುರ ತಾಲೂಕಿನ ಸಗರ ಪರೀಕ್ಷಾ ಕೇಂದ್ರದಲ್ಲಿ ತಾಯಿಯೊಡನೆ ಪರೀಕ್ಷೆ ಬರೆಯುತ್ತಿದ್ದಾನೆ.