ಬೆಂಗಳೂರು : ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಸೋತವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಅವರಲ್ಲಿ ಕೆ. ಸುಧಾಕರ್ ಒಬ್ಬರು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ವಿರುದ್ಧ ಸುಧಾಕರ್ ಸೋತಿದ್ದರು. ಬಳಿಕ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಪ್ರದೀಪ್ ಈಶ್ವ‌ರ್ ರಾಜೀನಾಮೆಗೆ ಒತ್ತಾಯಗಳು ಕೇಳಿಬರುತ್ತಿವೆ.

ಚಿಕ್ಕಾಬಳ್ಳಾಪುರದಲ್ಲಿ ಸುಧಾಕರ್ ಅವರು ಒಂದೇ ಒಂದು ಮತ ಹೆಚ್ಚಿಗೆ ಪಡೆದರು ನಾನು ರಾಜೀನಾಮೆ ನೀಡುತ್ತೇನೆ ಎಂದು ಪ್ರದೀಪ್‌ ಈಶ್ವರ್ ಚುನಾವಣೆಗೂ ಮುಂಚೆ ಹೇಳಿದ್ದರು. ಅಲ್ಲದೆ, ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಸುಧಾಕ‌ರ್ ಅವರು ಗೆಲುವು ದಾಖಲಿಸಿದ್ದು, ಪ್ರದೀಪ್ ಈಶ್ವರ್ ರಾಜೀನಾಮೆಗೆ ಸಾಕಷ್ಟು ಮಂದಿ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಪ್ರದೀಪ್ ಈಶ್ವರ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದೇ ಸದ್ಯ ಕತೂಹಲವಾಗಿದೆ.

ಪ್ರದೀಪ್‌ ಈಶ್ವರ್ ರಾಜೀನಾಮೆಗೆ ಒತ್ತಾಯಗಳು ಕೇಳಿಬರುತ್ತಿರುವುದರ ನಡುವೆಯೇ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ಚಿಕ್ಕಬಳ್ಳಾಪುರದ ಕಂದವಾರದಲ್ಲಿರುವ ಪ್ರದೀಪ್ ಈಶ್ವರ್ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರ ಪರಿಣಾಮ ಮನೆಯ ಕಿಟಕಿ, ಗಾಜು ಪುಡಿ ಪುಡಿಯಾಗಿದೆ. ಸುಧಾಕರ್ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಲ್ಲು ತೂರಾಟ ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ.

ಘಟನೆಯ ಬೆನ್ನಲ್ಲೇ ಚಿಕ್ಕಬಳ್ಳಾಪುರ ನಗರ ಪೊಲೀಸರು ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರದೀಪ್ ಈಶ್ವರ್ ಮನೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ