ಅಯೋಧ್ಯೆ : ಈ ವರ್ಷದ ಆರಂಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಭಗವಾನ್‌ ರಾಮ ಲಲ್ಲಾ ಮೂರ್ತಿಯ ಐತಿಹಾಸಿಕ ಪ್ರಾಣ ಪ್ರತಿಷ್ಠಾ ಸಮಾರಂಭದ ಗೌರವಾರ್ಥವಾಗಿ, ಭಾರತ ಸರ್ಕಾರವು ಸೀಮಿತ ಆವೃತ್ತಿಯ 50 ಗ್ರಾಂ ತೂಕದ ಸ್ಮರಣಿಕೆ ಬೆಳ್ಳಿಯ ನಾಣ್ಯವನ್ನು ಸಾರ್ವಜನಿಕ ಮಾರಾಟಕ್ಕೆ ಪರಿಚಯಿಸಿದೆ ಎಂದು ವರದಿಯಾಗಿದೆ.

ಫೆಬ್ರವರಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ಸ್ಮರಣಾರ್ಥ ನಾಣ್ಯಗಳನ್ನು ಅನಾವರಣಗೊಳಿಸಿದ ನಂತರ ಈ ನಾಣ್ಯದ ಬಿಡುಗಡೆಯು ಬಾಲ ರಾಮ ಮತ್ತು ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ಥೀಮ್ ಅನ್ನು ಆಚರಿಸುತ್ತದೆ.

ಈ ಬೆಳ್ಳಿ ನಾಣ್ಯಗಳ ಮಾರಾಟವು ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, 5,860 ರೂ. ಬೆಲೆ ಹೊಂದಿದೆ. ನಾಣ್ಯದ ಒಂದು ಬದಿಗೆ ಭಗವಾನ್‌ ರಾಮಲಲ್ಲಾ ಮತ್ತು ಮತ್ತೊಂದು ಬದಿಗೆ ಅಯೋಧ್ಯೆಯ ರಾಮ ಮಂದಿರವನ್ನು ಕಾಣಬಹುದಾಗಿದೆ.
ರಾಮಲಲ್ಲಾರ ನಾಣ್ಯದ ಜೊತೆಗೆ, ಬುದ್ಧನ ಜ್ಞಾನೋದಯವನ್ನು ಪ್ರತಿನಿಧಿಸುವ ದ್ವಿ-ಲೋಹದ ಹೊದಿಕೆಯ ಸ್ಮಾರಕ ನಾಣ್ಯವನ್ನು ಸಹ ಸೀತಾರಾಮನ್​ ಅವರು ಅನಾವರಣಗೊಳಿಸಿದ್ದರು. ಬುದ್ಧ ಮತ್ತು ಸ್ತೂಪದ ಆಕ್ಸಿಡೀಕೃತ ಚಿತ್ರಗಳನ್ನು ಮತ್ತು ಅಳಿವಿನಂಚಿನಲ್ಲಿರುವ ಒಂದು ಕೊಂಬಿನ ಘೇಂಡಾಮೃಗವನ್ನು ಒಳಗೊಂಡ ನಾಣ್ಯವನ್ನು ಸಹ ಬಿಡುಗಡೆ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾ ವಿಧಿವಿಧಾನಗಳಿಗೆ ನೇತೃತ್ವ ವಹಿಸಿದ್ದರು. ಸಮಾರಂಭವು ಜನವರಿ 12 ರಂದು ಪ್ರಾರಂಭವಾದ 11 ದಿನಗಳ ‘ಅನುಷ್ಠಾನ’ ಆಚರಣೆಯ ನಂತರ ಪ್ರಾಣ ಪ್ರತಿಷ್ಠೆ ಮೂಲಕ ಮುಕ್ತಾಯವಾಯಿತು, ಇದು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಾಗೂ ಐತಿಹಾಸಿಕ ಕ್ಷಣವನ್ನು ಸಂಕೇತಿಸುತ್ತದೆ.