ಬೆಂಗಳೂರು: ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಏಪ್ರಿಲ್‌ 14) ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಮೈಸೂರಿನಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೋದಿ, ಸಂಜೆ ಮಂಗಳೂರಿನಲ್ಲಿ ರೋಡ್‌ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ಮಧ್ಯಪ್ರದೇಶದ ಬೋಪಾಲ್ ಏರ್‌ಪೋರ್ಟ್‌ನಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮೋದಿ ಬಂದಿಳಿಯಲಿದ್ದಾರೆ. ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಪಯಣಿಸಲಿಸಲಿದ್ದಾರೆ. ಸಂಜೆ 5.15ಕ್ಕೆ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ, 5.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 7 ಗಂಟೆಗೆ ಕಾರ್ಯಕ್ರಮ ಮುಗಿಸಿ, ರಸ್ತೆ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿಂದ ಮಂಗಳೂರಿಗೆ ವಿಮಾನದ ಮೂಲಕ ತೆರಳಲಿದ್ದಾರೆ.

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭೆ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು ಮೈಸೂರಿನಲ್ಲಿ ಸಮಾವೇಶ ಆಯೋಜಿಸಲಿದ್ದು, ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ. ನಾಲ್ಕೂ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಅವರು ಮತಯಾಚನೆ ಮಾಡಲಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಅವರನ್ನು ಹುರಿದುಂಬಿಸಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನರನ್ನು ಕರೆಸುವ ದಿಸೆಯಲ್ಲಿ ದೋಸ್ತಿಗಳು (ಬಿಜೆಪಿ ಹಾಗೂ ಜೆಡಿಎಸ್)‌ ಪ್ಲಾನ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಮಾವೇಶದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಂಗಳೂರಿನಲ್ಲಿ ರೋಡ್‌ ಶೋ
ಕರಾವಳಿಯಲ್ಲೂ ಭಾನುವಾರ ಮೋದಿ ಅವರು ಪ್ರಚಾರ ನಡೆಸಲಿದ್ದಾರೆ. ಮಂಗಳೂರಿನಲ್ಲಿ ಸಂಜೆ 7.45ಕ್ಕೆ ಸುಮಾರು ಒಂದೂವರೆ ಕಿಲೋಮೀಟರ್‌ ರೋಡ್‌ ಶೋ ನಡೆಸಲಿದ್ದಾರೆ. ಸಂಜೆ 7.30ಕ್ಕೆ ಮೋದಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಅವರು ನಾರಾಯಣ ಗುರು ಸರ್ಕಲ್‌ಗೆ ಆಗಮಿಸಲಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಾರಾಯಣ ಗುರು ಸರ್ಕಲ್‌ನಿಂದ ನವಭಾರತ್‌ ಸರ್ಕಲ್‌ವರೆಗೆ ಮೋದಿ ಅವರು ರೋಡ್‌ ಶೋ ಕೈಗೊಳ್ಳಲಿದ್ದಾರೆ. ಇಲ್ಲೂ ಲಕ್ಷಾಂತರ ಜನ ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕರಾವಳಿಯಲ್ಲಿ ಈಗಾಗಲೇ ಬಿಜೆಪಿ ಪರ ಅಲೆ ಇದ್ದು, ಇದನ್ನು ಇಮ್ಮಡಿಗೊಳಿಸುವುದು ಮೋದಿ ಅವರ ರೋಡ್‌ ಶೋ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.