ಬೆಳಗಾವಿ:
ಕೆಲವೇ ತಿಂಗಳುಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಮುಂದಾಗಿದೆ. ಇದಕ್ಕೆ ಮಹಾರಾಷ್ಟ್ರ ಸರಕಾರ ಬೆನ್ನೆಲುಬಾಗಿ ನಿಲ್ಲಲು ಮುಂದಾಗಿರುವ ಸಂಗತಿ ಇದೀಗ ಬಯಲಾಗಿದೆ. ಚುನಾವಣೆ ಹೊತ್ತಲ್ಲೇ ಮತ್ತೆ ಬೆಳಗಾವಿ ಗಡಿಭಾಗದ ಮರಾಠಿಗರನ್ನು ಎಚ್ಚರಿಸಲು ಮಹಾರಾಷ್ಟ್ರದ ಉನ್ನತ ನಿಯೋಗ ಗುರುವಾರ ಬೆಳಗಾವಿಗೆ ಆಗಮಿಸಿ ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ ಎಂದು ಅಭಯ ನೀಡಿ ಕೆಲ ಭರವಸೆಗಳನ್ನು ನೀಡಿದ್ದಾರೆ.

ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ಕೆಲವು ಕಾನೂನು ಅಡೆತಡೆಗಳಿವೆ. ಇದೇ ಕಾರಣಕ್ಕೆ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ನಿಲ್ಲುತ್ತಿಲ್ಲ. ಹೀಗಾಗಿ ಈ ಎಲ್ಲಾ ಅಡೆತಡೆಗಳನ್ನು ಸರಿಪಡಿಸಲು ಮಹಾರಾಷ್ಟ್ರ ಸರ್ಕಾರ ತಿದ್ದುಪಡಿಗೆ ಮುಂದಾಗಿದೆ ಎಂದು ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದ ಮಹಾರಾಷ್ಟ್ರದ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಹಾಗೂ ಸಂಸದ ಧೈರ್ಯಶೀಲ ಮಾನೆ ಹೇಳಿದ್ದಾರೆ.

ಬೆಳಗಾವಿಯಲ್ಲಿ ಗುರುವಾರ ಎಂಇಎಸ್‌ ಆಯೋಜಿಸಿದ್ದ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ವಿಮೆಯ ಫಲಾನುಭವಿಗಳ ಸಭೆ, ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಹಾಗೂ ಉದ್ಯೋಗ ಭರವಸೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾರಾಷ್ಟ್ರ ಸರ್ಕಾರ ಗಡಿ ವಿವಾದಕ್ಕೆ ಅಗ್ರಸ್ಥಾನ ನೀಡಿದೆ. ಇಷ್ಟಕ್ಕೂ ಮಹಾರಾಷ್ಟ್ರದ ಹಾಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಗಡಿ ವಿವಾದದಿಂದಲೇ ಬೆಳಕಿಗೆ ಬಂದವರು ಅವರಿಗೆ ಬೆಳಗಾವಿ ವಿವಾದದ ಸಂಪೂರ್ಣ ಅರಿವಿದೆ ಅವರು ಬೆಳಗಾವಿ ಮರಾಠಿಗರ ಹಿತಶಕ್ತಿ ಕಾಪಾಡಲು ಸದಾ ಬದ್ಧರಾಗಿದ್ದಾರೆ ಅವರೇ ನಮ್ಮ ಶಕ್ತಿಯಾಗಿರುವಾಗ ಬಂದವರು. ಹೀಗಾಗಿ ಬೆಳಗಾವಿ ಮರಾಠಿಗರು ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದರು.

ಗಡಿ ಪ್ರಕರಣ ಇಷ್ಟು ದೀರ್ಘಾವಧಿ ತೆಗೆದುಕೊಳ್ಳಬಾರದಿತ್ತು. ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಎಂಇಎಸ್‌ ಮಾಡಿದ ಕೆಲವು ಲೋಪಗಳ ಕಾರಣ ಸುಪ್ರೀಂಕೋರ್ಟ್‌ ಕೈಗೆತ್ತಿಕೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಕಾನೂನು ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಆದಷ್ಟು ಬೇಗ ತಿದ್ದುಪಡಿಯ ಮೂಲಕ ಅಡೆತಡೆ ನಿವಾರಣೆ ಮಾಡುವ ಭರವಸೆ ಇದೆ. ಏಕನಾಥ ಶಿಂಧೆ ಗಡಿ ವಿವಾದದ ಪ್ರತ್ಯಕ್ಷ ಸಾಕ್ಷಿ ಆಗಿದ್ದಾರೆ. ಗಡಿ ಹೋರಾಟದ ಮೂಲಕವೇ ರಾಜಕೀಯದಲ್ಲಿ ಬೆಳೆದು ಬಂದಿದ್ದಾರೆ. ಅವರಿಗೆ ಸಾಕಷ್ಟು ಹಿಡಿತವಿದೆ. ಪ್ರಕರಣದಲ್ಲಿ ಏನೇನು ಅಡ್ಡಿಗಳು ಇವೆ ಹಾಗೂ ಕರ್ನಾಟಕದಲ್ಲಿ ಮರಾಠಿಗರಿಗೆ ಏನೇನು ಅನ್ಯಾಯ ಆಗುತ್ತಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದಾರೆ. ಸದನದಲ್ಲಿ ಚರ್ಚೆ ಮಾಡಲಾಗಿದೆ. ಮಹಾರಾಷ್ಟ್ರದ ಎಲ್ಲ ಸಂಸದರೊಂದಿಗೆ ಚರ್ಚೆ ನಡೆಸಿದ್ದು, ಸಂಸತ್‌ ಅಧಿವೇಶನದಲ್ಲಿ ಧ್ವನಿ ಎತ್ತಲು ತಿಳಿಸಲಾಗಿದೆ. ಸರ್ವಪಕ್ಷಗಳ ಮುಖಂಡರ ನಿಯೋಗದೊಂದಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಸಿದ್ಧತೆ ನಡೆದಿದೆ ಎಂದು ಹೇಳಿದರು.

ಕಳೆದ ವರ್ಷ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಕರೆದು ಸಮನ್ವಯ ಸಮಿತಿ ರಚಿಸಿದ್ದರು. ಇದರಿಂದ ಏನೂ ಪ್ರಯೋಜನ ಆಗಲಿಲ್ಲ. ಮರಾಠಿಗರ ಅನ್ಯಾಯ ನಿಂತಿಲ್ಲ ಎಂದು ಆರೋಪಿಸಿದರು.

ವಿವಾದಕ್ಕೆ ಒಳಪಟ್ಟ ಗಡಿಯ 865 ಹಳ್ಳಿಗಳ ಜನರನ್ನೂ ನಾವು ಮಹಾರಾಷ್ಟ್ರದ ಪ್ರಜೆಗಳು ಎಂದೇ ಪರಿಗಣಿಸಿದ್ದೇವೆ ಎಂದೂ ಹೇಳಿದರು.

ಗಡಿ ಪ್ರದೇಶ ಜನರಿಗೆ ಮಹಾರಾಷ್ಟ್ರ ದಿಂದ ಆರೋಗ್ಯ ವಿಮೆ :
ಮಹಾರಾಷ್ಟ್ರ ಸರ್ಕಾರದಿಂದ ಗಡಿ ಪ್ರದೇಶದ ಜನರಿಗೆ ವ್ಯದ್ಯಕೀಯ ಸೇವೆ ನೀಡಲು ನಿರ್ಧರಿಸಿದೆ ಎಂದು ಮಹಾರಾಷ್ಟ್ರದ ವಿಶೇಷಾಧಿಕಾರಿ ಮಂಗೇಶ್ ಚಿವ್ಟೆ ಹೇಳಿದರು.
ಮಹಾರಾಷ್ಟ್ರದ ವೈದ್ಯಕೀಯ ಚಿಕಿತ್ಸಾ ಘಟಕದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಮಂಗೇಶ್ ಚಿವ್ಟೆ ಅವರು ಯೋಜನೆ ಬಗ್ಗೆ ವಿವರಿಸಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮ ಮೊದಲ ಭಾಷಣದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಗಡಿ ಸಮಸ್ಯೆ ಬಗೆಹರಿಸಲು ಹಾಗೂ ಗಡಿ ಭಾಗದಲ್ಲಿರುವ ಮರಾಠಿಗರ ರಕ್ಷಣೆಗೆ ಮೊದಲ ಆದ್ಯತೆ ನೀಡುವುದಾಗಿ ಘೋಷಿಸಿದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಗಡಿ ಸಮಸ್ಯೆ ಆಂದೋಲನದಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಆದ್ದರಿಂದ, ಗಡಿ ನಿವಾಸಿಗಳು ಮತ್ತು ಗಡಿ ಸಮಸ್ಯೆಗಳು ಅವರ ನಿಕಟ ವಿಷಯಗಳಾಗಿವೆ. ಆದ್ದರಿಂದ ವೈದ್ಯಕೀಯ ನೆರವು ಕೋಶವನ್ನು ಪುನರ್‌ ಸಂಘಟಿಸಿದ ಬಳಿಕ ಗಡಿ ಭಾಗದಲ್ಲಿರುವ ಮರಾಠಿ ಭಾಷಿಕರಿಗೆ ಹಾಗೂ ಮಹಾರಾಷ್ಟ್ರದ ನಾಗರಿಕರಿಗೆ ವೈದ್ಯಕೀಯ ನೆರವು ನೀಡಲು ಆದೇಶಿಸಿದ್ದಾರೆ. ವೈದ್ಯಕೀಯ ನೆರವು ಕೋಶದ ಮರು ಸಂಘಟನೆಯ ನಂತರ ವೈದ್ಯಕೀಯ ಚಿಕಿತ್ಸೆಗಾಗಿ ಇಲ್ಲಿಯವರೆಗೆ 181 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.