ವಿಜಯಪುರ : ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ, ಬದ್ಧತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಜಯಪುರ ನಗರ ದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ರಾಜು
ಹಲಗೂರು ರವರ ಪರವಾಗಿ ಮಾತಾಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ. ಇದರಲ್ಲಿ ನಂಬಿಕೆ ಇಟ್ಟು ಅವಕಾಶ ವಂಚಿತರಿಗೆ ಅವಕಾಶ ಕೊಡಲಾಗುತ್ತಿದೆ. ಗರೀಬಿ ಹಠಾವೋ, ಭೂ ಸುಧರಣಾ ಕಾಯ್ದೆ, ಜೀತ ಪದ್ಧತಿ ರದ್ದು ಕಾಯ್ದೆ, ಮಲ ಹೊರುವ ಪದ್ಧತಿ ರದ್ದತಿ ಜಾರಿಗೆ ಬಂದಿದ್ದು ಕಾಂಗ್ರೆಸ್ ಕಾಲದಲ್ಲಿ. ವಾಜಪೇಯಿ ಅವರು ಇಂಡಿಯಾ ಶೈನಿಂಗ್ ಎಂದು 2004 ರ ಸೋತರು. 2047 ಕ್ಕೇ ವಿಕಸಿತ ಭಾರತ್ ಎಂದು ನರೇಂದ್ರ ಮೋದಿಯವರು ಹೇಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಮೋದಿ ಸೋಲುತ್ತಾರೆ . ಅದಕ್ಕಾಗಿಯೇ 400 ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಸಂವಿಧಾನ ಬದಲಾಯಿಸಲು 400 ಸೀಟು ಬೇಕೆಂದು ಹೇಳುತ್ತಿದ್ದಾರೆ. ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ, ಬದ್ಧತೆ ಇಲ್ಲ. ಸಂವಿಧಾನಕ್ಕೆ, ಸಾಮಾಜಿಕ ನ್ಯಾಯಕ್ಕೆ, ಬಡವರಿಗೆ ವಿರುದ್ದವಾಗಿದ್ದಾರೆ. ಸಮಾಜದಲ್ಲಿ ಅಸಮಾನತೆ ಇರಬೇಕು ಎಂದು ಹೇಳುವವರು ಬಿಜೆಪಿಯವರು. ಅಸಮಾನತೆ ಇದ್ದರೆ ಮಾತ್ರ ಶೋಷಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
*ರೈತರ ಬದಲು ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದ ಮೋದಿ*
ಸ್ವಾಮಿನಾಥನ್ ವರದಿಯಂತೆ ರೈತರಿಗೆ ಬೆಂಬಲ ಬೆಲೆ ನೀಡಲಿಲ್ಲ. ರೈತರಿಗೆ ಕೇಂದ್ರ ಸರ್ಕಾರ ಮೋಸ ಮಾಡಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ನ್ನು ಗೆಲ್ಲಿಸಬೇಕೆಂದು ಕೋರಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿ 50 ಸಾವಿರದವರೆಗೆ 27 ಲಕ್ಷ ರೈತರಿಗೆ 8165 ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಬಿಜೆಪಿಯ ಮೋದಿಯಾಗಲಿ, ಯಡಿಯೂರಪ್ಪನಾಗಲಿ, ಬಸವರಾಜ ಬೊಮ್ಮಾಯಿಯಾಗಲಿ ರೈತರಿಗೆ ಸಾಲವನ್ನು ಮನ್ನಾ ಮಾಡಿಲ್ಲ. ಆದರೆ ಮೋದಿಯವರು ಅದಾನಿ ಹಾಗೂ ಅಂಬಾನಿಯವರಿಗೆ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡದ ಮೋದಿಯವರು ಬಂಡವಾಳಶಾಹಿಗಳ ಸಾಲವನ್ನು ಮನ್ನಾ ಮಾಡಿದರು ಎಂದು ತಿಳಿಸಿದರು.
*ರಾಜ್ಯದಲ್ಲಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ*
ಸಾಲ ಮನ್ನಾ ಮಾಡಿ ಎಂದು ಜನಪ್ರತಿನಿಧಿಗಳ ಮನವಿಗೆ ‘ನಮ್ಮ ಬಳಿ ನೋಟು ಪ್ರಿಂಟ್ ಮಾಡುವ ಮಷೀನು ಇಲ್ಲ’ ಎಂದಿದ್ದರು. ಅವರ ಬಳಿ ನೋಟು ಎಣಿಸುವ ಮಷೀನು ಇದೇಯೇ ಬದಲು ನೋಟು ಪ್ರಿಂಟ್ ಮಾಡುವ ಮಷೀನು ಇಲ್ಲ. ಬಿಜೆಪಿಯವರು ರಾಜ್ಯದಲ್ಲಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದು ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯಾಗಿಸಿದ್ದಾರೆ ಎಂದರು.
*ಮೋದಿಯ ‘ಅಚ್ಛೇ ದಿನ್’ ಬರಲೇ ಇಲ್ಲ*
ರೂಪಾಯಿ ಮೌಲ್ಯವನ್ನು ಹೆಚ್ಚಿಸುವುದಾಗಿ ಹಾಗೂ ಪೆಟ್ರೋಲ್, ಡೀಸೆಲ್ , ಗ್ಯಾಸ್ ಸಿಲಿಂಡರ್ ಗಳ ಬೆಲೆ ಕಡಿಮೆ ಮಾಡುವುದಾಗಿ ಹೇಳಿದ ನರೇಂದ್ರ ಮೋದಿಯವರು ಹೇಳಿದ ‘ಅಚ್ಛೇ ದಿನ್ ಆಯೇಗಾ’ ಎಂದರು. ಆದರೆ ಅಚ್ಛೇ ದಿನ್ ಬರಲೇ ಇಲ್ಲ ನರೇಂದ್ರ ಮೋದಿಯವರು ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
*ಗ್ಯಾರಂಟಿಗಳು ಯಾವ ಕಾರಣಕ್ಕೂ ನಮ್ಮ ಅವಧಿಯಲ್ಲಿ ನಿಲ್ಲಿಸುವುದಿಲ್ಲ*
ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಬೆಲೆಯೇರಿಕೆಯಿಂದ ತತ್ತರಿಸಿರುವ ಜನರಿಗೆ ಕೊಳ್ಳುವ ಶಕ್ತಿ ಹೆಚ್ಚಿಸಲು ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ , ಅನ್ನಭಾಗ್ಯ, ಶಕ್ತಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಸವಾದಿ ಶರಣರ ಹಾದಿಯಲ್ಲಿ ನಡೆಯುವ ನಾವು ವಿಶ್ವಗುರು ಬಸವಣ್ಣನವರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಗ್ಯಾರಂಟಿಗಳು ಯಾವ ಕಾರಣಕ್ಕೂ ನಮ್ಮ ಅವಧಿಯಲ್ಲಿ ನಿಲ್ಲಿಸುವುದಿಲ್ಲ ಎಂದು ಹೇಳಿದರು. 36000 ಕೋಟಿ ರೂಗಳನ್ನು ಖರ್ಚು ಮಾಡಿದ್ದೇವೆ. ಈ ವರ್ಷ 52009 ಕೋಟಿ ಮೀಸಲಿಟ್ಟು. 1.20 ಲಕ್ಷ ಕೋಟಿ ರೂಪಾಯಿಗಳನ್ನು ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಸುಳ್ಳು ಹೇಳುವ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ತಿಳಿಸಿದರು.
*ಅನ್ನಭಾಗ್ಯಕ್ಕೆ ಕೇಂದ್ರ ಅಕ್ಕಿ ನೀಡಲು ನಿರಾಕರಣೆ*
ಶಕ್ತಿ ಯೋಜನೆಯಡಿ 196 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂಬ ನಮ್ಮ ಭರವಸೆಯಂತೆ ನೀಡಿದ್ದೆವು. ಆದರೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿಯನ್ನು ನೀಡಲು ಒಪ್ಪಲಿಲ್ಲ. ಅಕ್ಕಿ ನೀಡದೇ ಕೇಂದ್ರ ಸರ್ಕಾರ ರಾಜ್ಯದ ಜನರಿಗೆ ಮೋಸ ಮಾಡಿದೆ. ಆದ್ದರಿಂದ ಅಕ್ಕಿಯ ಬದಲು 170 ರೂ. ಹಣವನ್ನು ನೀಡುತ್ತಿದ್ದೇವೆ. ಶಕ್ತಿ ಯೋಜನೆಯನ್ನು ಪ್ರಶಂಸಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಪತ್ರ ಬರೆದಿದ್ದರು. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಜಾತಿ ಧರ್ಮದ ಬೇಧವಿಲ್ಲದೇ ಎಲ್ಲರಿಗೂ ನೀಡಲಾಗುತ್ತಿದೆ. ಗೃಹ ಜ್ಯೋತಿ ಯೋಜನೆಯಡಿ ಜನರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನೀಡಲಾಗುತ್ತಿದೆ.
*ಆರ್ಥಿಕ ಶಕ್ತಿ ತುಂಬುವ ಉದ್ದೇಶವಿದೆ.*
ಅಖಿಲ ಭಾರತ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಮಾಡಿದ್ದು ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ, ಪ್ರತಿ ತಿಂಗಳು 8500 ಸಾವಿರ ರೂಪಾಯಿ ಕೊಡಲಿದೆ. ನಿರುದ್ಯೋಗಿ ಯುವಕರಿಗೆ 1ಲಕ್ಷ ರೂಪಾಯಿ ಸ್ಟೈಪೆಂಡ್, ರೈತರ ಸಾಲ ಮನ್ನಾ ಮಾಡಲಾಗುವುದು. ಎಂ.ಎಸ್.ಪಿಗೆ ಕಾನೂನು, ನರೇಗಾ ಅಡಿ ಕನಿಷ್ಠ ವೇತನ ನಿಗದಿ ಮಾಡಿ ಪ್ರತಿ ದಿನ 400 ರೂಪಾಯಿ ಕೊಡಲಾಗುತ್ತಿದೆ. ಬಡವರಿಗೆ , ಅವಕಾಶ ವಂಚಿತರಿಗೆ ಜಾತಿ, ಧರ್ಮ, ಪಕ್ಷ, ಭಾಷೆ ಯಾವುದೂ ಪರಿಗಣಿಸದೆ ಆರ್ಥಿಕ ಶಕ್ತಿ ತುಂಬುವ ಉದ್ದೇಶವಿದೆ ಎಂದರು.
*ಕಾಂಗ್ರೆಸ್ ಪಕ್ಷಸ ಅಭ್ಯರ್ಥಿ ಗೆಲ್ಲಿಸಿ*
ತಾವೆಲ್ಲರೂ ಈ ಬಾರಿ ದೊಡ್ಡ ಮನಸ್ಸು ಮಾಡಿ, ಬಾಯಿ ಬಿಡದ, ಜಿಗಜಿಣಗಿ ಅವರನ್ನು ಸೋಲಿಸಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಹೇಳಿದರು.