ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಚಿಕ್ಕಪ್ಪನ ಮಗ ಹಾಗೂ ಬಿಜೆಪಿ ನಾಯಕ ವರುಣ್ ಗಾಂಧಿ ಅವರು ಉತ್ತರ ಪ್ರದೇಶದ ಗಾಂಧಿ ಮನೆತನದ ಭದ್ರಕೋಟೆ ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ತಮ್ಮ ಪಕ್ಷ ನೀಡಿದ್ದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿಯು ಪ್ರಸ್ತಾವನೆ ಮುಂದಿಟ್ಟ ನಂತರ ಒಂದು ವಾರದವರೆಗೆ ವರುಣ್ ಗಾಂಧಿ ಈ ಪ್ರಸ್ತಾಪದ ಬಗ್ಗೆ ಪರಿಗಣಿಸಲು ಒಂದು ವಾರ ಕಾಲ ತೆಗೆದುಕೊಂಡು ನಂತರ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ.

ಆ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ ಎಂಬ ನಿರಂತರ ಮಾಧ್ಯಮ ವರದಿಗಳ ನಂತರ ಬಿಜೆಪಿಯು ಅಲ್ಲಿ ಸ್ಪರ್ಧಿಸುವಂತೆ ವರುಣ್‌ ಗಾಂಧಿ ಮುಂದೆ ಪ್ರಸ್ತಾಪವಿಟ್ಟಿತ್ತು ಎಂದು ಮೂಲಗಳು ಹೇಳುತ್ತವೆ.

ಪಿಲಿಭಿತ್ ಕ್ಷೇತ್ರದ ಹಾಲಿ ಸಂಸದ ವರುಣ್ ಗಾಂಧಿ ಅವರಿಗೆ ಅಲ್ಲಿಂದ ಟಿಕೆಟ್‌ ನಿರಾಕರಿಸಿದ ನಂತರ ಒಂದು ವಾರದ ಹಿಂದೆ ಬಿಜೆಪಿ ನಾಯಕತ್ವ ಅವರನ್ನು ಸಂಪರ್ಕಿಸಿದೆ ಎಂದು ಮೂಲಗಳು ತಿಳಿಸಿವೆ. ಸಂಪರ್ಕಿಸಿದಾಗ, ವರುಣ್ ಗಾಂಧಿಯವರು “ಚಿಂತನೆ” ಮಾಡಲು ಸಮಯವನ್ನು ಕೇಳಿದರು. ನಂತರ ಅವರು ವೈಯಕ್ತಿಕ ನೆಲೆಯ ಚುನಾವಣಾ ಹೋರಾಟಕ್ಕೆ ಇಷ್ಟವಿಲ್ಲದಿರುವುದನ್ನು ಉಲ್ಲೇಖಿಸಿ ಪ್ರಸ್ತಾಪವನ್ನು ತಿರಸ್ಕರಿಸಿದರು ಎಂದು ಮೂಲಗಳು ತಿಳಿಸಿವೆ. 1984 ರ ಚುನಾವಣೆಯಲ್ಲಿ ಅವರ ವರುಣ್‌ ಅವರ ತಾಯಿ ಮೇನಕಾ ಗಾಂಧಿ ಅವರು ರಾಜೀವ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು, ಆದರೆ ವಿಫಲವಾಗಿದ್ದರು. ಈ ಕಾರಣದಿಂದ ವರುಣ್‌ ಮುಂದೆ ಈ ಪ್ರಸ್ತಾಪ ಮುಂದಿಟ್ಟಿದ್ದರು ಎಂದು ಹೇಳಲಾಗುತ್ತಿದೆ.

ವರುಣ್ ಗಾಂಧಿ ಅವರು ಇಂದಿರಾ ಗಾಂಧಿಯವರ ಎರಡನೇ ಮಗ ಸಂಜಯ್ ಗಾಂಧಿ ಹಾಗೂ ಮೇನಕಾ ಗಾಂಧಿ ಪುತ್ರ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಇವರು ಚಿಕ್ಕಪ್ಪನ ಮಗ. 44 ವರ್ಷದ ವರುಣ್ ಗಾಂಧಿ ಪಿಲಿಭಿತ್ ಕ್ಷೇತ್ರದಿಂದ ಬಿಜೆಪಿಯಿಂದ ಹಾಲಿ ಸಂಸದರಾಗಿದ್ದಾರೆ. ಈ ಬಾರಿ ಅವರಿಗೆ ಆ ಕ್ಷೇತ್ರದ ಟಿಕೆಟ್ ಸಿಕ್ಕಿಲ್ಲ. ಜಿತಿನ್ ಪ್ರಸಾದ ಪಿಲಿಭಿತ್‌ನಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದರೆ, ವರುಣ್‌ ಅವರ ತಾಯಿ ಮೇನಕಾ ಗಾಂಧಿ ಅವರು ಸುಲ್ತಾನ್‌ಪುರದಲ್ಲಿ ಕಣದಲ್ಲಿದ್ದಾರೆ.ಇದಾದ ಬಳಿಕ ಬಿಜೆಪಿಯು ರಾಯ್ ಬರೇಲಿಯಲ್ಲಿ ವರುಣ್ ಗಾಂಧಿಯನ್ನು ಕಣಕ್ಕಿಳಿಸಲು ಬಿಜೆಪಿ ಯೋಚಿಸಿತ್ತು ಎನ್ನಲಾಗಿದೆ.
ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸತತ ನಾಲ್ಕು ಅವಧಿಗೆ ರಾಯ್ ಬರೇಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಬಾರಿ ರಾಜ್ಯಸಭೆಗೆ ಅವರು ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ಸ್ಥಾನ ತೆರವಾಗಿದೆ. ಕಾಂಗ್ರೆಸ್ ಪಕ್ಷವು ಅಮೇಥಿ ಅಥವಾ ರಾಯ್ ಬರೇಲಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸದಿದ್ದರೂ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ಎರಡೂ ಸ್ಥಾನಗಳಿಗೆ “ಅಚ್ಚರಿʼʼ ಆಯ್ಕೆ ಬಗ್ಗೆ ಹೇಳಿದ್ದರು.

ಸೋನಿಯಾ ಅವರಿಗಿಂತ ಮೊದಲು ಮಾಜಿ ಪ್ರಧಾನಿ ಇಂದಿರಾಗಾಂಧಿ ರಾಯ್ ಬರೇಲಿಯಿಂದ ಮೂರು ಬಾರಿ ಗೆದ್ದಿದ್ದರು. ಈ ಸ್ಥಾನವು ಇಂದಿರಾ ಅವರ ಪತಿ ಫಿರೋಜ್ ಗಾಂಧಿಯವರನ್ನು 1952 ಮತ್ತು 1957 ರಲ್ಲಿ ಎರಡು ಬಾರಿ ಆಯ್ಕೆ ಮಾಡಿತ್ತು. ಆದ್ದರಿಂದ, ಈ ಕುಟುಂಬದ ಭದ್ರಕೋಟೆಯಿಂದ ಸ್ಪರ್ಧಿಸಲು ಕಾಂಗ್ರೆಸ್ ‘ಗಾಂಧಿ’ಯವರನ್ನು ಕಣಕ್ಕೆ ಇಳಿಸಲು ಬಯಸುತ್ತದೆ ಎಂದು ವ್ಯಾಪಕವಾಗಿ ಊಹಿಸಲಾಗಿದೆ ಮತ್ತು ಪ್ರಿಯಾಂಕಾ ರೇಸ್‌ನಲ್ಲಿ ಮುಂದಿದ್ದಾರೆ ಎಂದು ಹಿರಿಯ ಕಾಂಗ್ರೆಸ್ಸಿಗ ಎ.ಕೆ. ಆಂಟನಿ ಕೂಡ ಸುಳಿವು ನೀಡಿದ್ದಾರೆ.
ರಾಯ್ ಬರೇಲಿ ಕಾಂಗ್ರೆಸ್ ಭದ್ರಕೋಟೆಯಾಗಿ ಮುಂದುವರಿದಿದ್ದರೂ, ಅದರ ‘ಹಿಡಿತ’ ವರ್ಷಗಳಿಂದ ದುರ್ಬಲಗೊಳ್ಳುತ್ತಿದೆ. ರಾಯ್ ಬರೇಲಿಯ ಇಬ್ಬರು ಪ್ರಬಲ ಶಾಸಕರಾದ ಸಮಾಜವಾದಿ ಪಕ್ಷದ ಮನೋಜ್ ಪಾಂಡೆ ಮತ್ತು ಕಾಂಗ್ರೆಸ್‌ನ ಅದಿತಿ ಸಿಂಗ್ ಈಗ ಬಿಜೆಪಿಯಲ್ಲಿದ್ದಾರೆ, ಇದು ಕಾಂಗ್ರೆಸ್‌ ಪಕ್ಷಕ್ಕೆ ಚಿಂತೆಯನ್ನು ಹೆಚ್ಚಿಸಿದೆ.