ಕನಕಗಿರಿ: ಕೆಲ ದಿನಗಳ ಹಿಂದೆ ಮೋದಿ… ಮೋದಿ… ಎನ್ನುವವರ ಕಪಾಳಕ್ಕೆ ಬಾರಿಸಿ ಎಂದಿದ್ದ ಸಚಿವ ಶಿವರಾಜ ತಂಗಡಗಿ ಎದುರೇ ಜಾತ್ರೆಯಲ್ಲಿ ಯುವಕರ ತಂಡವೊಂದು ಮೋದಿ ಮೋದಿ… ಎಂದು ಕೂಗಿದ ಘಟನೆ ಕನಕಗಿರಿಯಲ್ಲಿ ಭಾನುವಾರ ನಡೆದಿದೆ. ಕನಕಗಿರಿಯ ಲಕ್ಷ್ಮೀ ನರಸಿಂಹ ದೇವರ ಗರುಡೋತ್ಸವದ ಮೆರವಣಿಗೆಯಲ್ಲಿ ತಂಗಡಗಿ ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು. ದೇವರ ದರ್ಶನ ಪಡೆದು ಮುಖ್ಯದ್ವಾರದಿಂದ ಹೊರ ಬರುತ್ತಿದ್ದಂತೆ ತಂಗಡಗಿ ಅವರನ್ನು ನೋಡಿದ ಯುವಕರು ಮೋದಿ… ಮೋದಿ… ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಸಚಿವರ ಬೆಂಬಲಿಗರು ತಂಗಡಗಿ…ತಂಗಡಗಿ… ಎಂದು ಜೈಕಾರ ಹಾಕಿದರು. ಮೋದಿ ಮೋದಿ.. ಕೂಗು ಜೋರಾಗುತ್ತಿದ್ದಂತೆ ತಂಗಡಗಿ ಮುಗುಳ್ಳಗುತ್ತಾ ಬೆಂಬಲಿಗರೊಂದಿಗೆ ಮುಂದೆ ಸಾಗಿದರು. ನಂತರ ಯುವಕರು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿ ಸ್ಥಳದಿಂದ ನಿರ್ಗಮಿಸಿದರು.

ಸಚಿವರ ಹೇಳಿಕೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.