ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೃಣಾಲ ಹೆಬ್ಬಾಳಕರ್ ಸೋಮವಾರ (ಏ.15) ನಾಮಪತ್ರ ಸಲ್ಲಿಸಲಿದ್ದಾರೆ.

ಅಂದು ಬೆಳಗ್ಗೆ ಸುಳೇಬಾವಿ ಮಹಾಲಕ್ಷ್ಮೀ ದೇವಸ್ಥಾನ ಮತ್ತು ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ 11 ಗಂಟೆಗೆ ಮೆರವಣಿಗೆಯಲ್ಲಿ ಆಗಮಿಸಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವರು.

ಉಪಮುಖ್ಯಮಂತ್ರಿಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೃಣಾಲ ಹೆಬ್ಬಾಳಕರ್ ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಲಿದ್ದಾರೆ. ಭಾನುವಾರ ರಾತ್ರಿ ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸುವ ಶಿವಕುಮಾರ, ಸೋಮವಾರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿ ನಂತರ ವಿಶೇಷ ವಿಮಾನದ ಮೂಲಕ ಶಿವಮೊಗ್ಗಕ್ಕೆ ತೆರಳುವರು.

ಮೃಣಾಲ ಹೆಬ್ಬಾಳಕರ್ ನಾಮಪತ್ರ ಸಲ್ಲಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಜಿಲ್ಲೆಯ ಶಾಸಕರು, ಮುಖಂಡರು, ರಾಜ್ಯದ ಇನ್ನೂ ಕೆಲವು ನಾಯಕರು ಸಹ ಪಾಲ್ಗೊಳ್ಳಲಿದ್ದಾರೆ.