ಮುಂಬೈ: ಇದೇ ಮೊದಲ ಬಾರಿಗೆ ತಮ್ಮ ಮಗನ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾ‌ರ್, ಮಗ ಆರವ್ ಸರಳತೆಯನ್ನು ಕೊಂಡಾಡಿದ್ದಾರೆ.

ಜಿಯೊ ಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಕ್ರಿಕೆಟಿಗ ಶಿಖ‌ರ್ ಧವನ್ ಅವರ ಧವನ್ ಕರೆಂಗೆ ಟಾಕ್ ಶೋದಲ್ಲಿ ಮಾತನಾಡಿರುವ ಅಕ್ಷಯ್, ಕೌಟುಂಬಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಲಂಡನ್ ವಿಶ್ವವಿದ್ಯಾಲಯದಲ್ಲಿ ನನ್ನ ಮಗ ಆರವ್ ವ್ಯಾಸಂಗ ಮಾಡುತಿದ್ದಾನೆ. ಯಾರನ್ನು ಅವಲಂಬಿಸಿಲ್ಲ. ಎಲ್ಲವನ್ನು ತಾನೇ ಮಾಡುತ್ತಾನೆ. ಬಟ್ಟೆ ಖರೀದಿಸಲು ಸೆಕೆಂಡ್ ಹ್ಯಾಂಡ್ ಸ್ಟೋರ್‌ಗಳಿಗೆ ಹೋಗುತ್ತಾನೆ. ಆತ ಧರಿಸುವ ಬಟ್ಟೆಗಳು ಸೆಕೆಂಡ್ ಬಟ್ಟೆಗಳಾಗಿರುತ್ತದೆ. ವೃಥಾ ಹಣ ಖರ್ಚು ಮಾಡುವುದನ್ನು ಆರವ್ ಇಷ್ಟಪಡುವುದಿಲ್ಲ ಎಂದರು.

ಆರವ್ ಸಿನಿಮಾದಲ್ಲಿ ನಟಿಸುತ್ತಾರೆಯೇ ಎಂಬ ಪ್ರಶ್ನೆಗೆ, ಇಂತಹದೇ ಕ್ಷೇತ್ರದಲ್ಲಿ ಮುಂದುವರಿಯಬೇಕೆಂದು ನಾವು ನಮ್ಮ ಮಕ್ಕಳಿಗೆ ಒತ್ತಾಯಿಸುತ್ತಿಲ್ಲ. ಆರವ್‌ಗೆ ಫ್ಯಾಷನ್ ಬಗ್ಗೆ ತುಂಬಾ ಆಸಕ್ತಿ ಇದೆ. ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ನನಗೆ ಹೇಳಿದ್ದಾನೆ. ಫ್ಯಾಷನ್ ಲೋಕದಲ್ಲಿ ವೃತ್ತಿ ಜೀವನ ಮುಂದುವರಿಸುವ ಕನಸು ಕಾಣುತ್ತಿದ್ದಾನೆ ಎಂದು ಹೇಳಿದರು.

ಪತ್ನಿ ಟ್ವಿಂಕಲ್ ಬಗ್ಗೆ ಮಾತನಾಡಿದ ಅಕ್ಷಯ್, ಆರವ್‌ನನ್ನು ಟ್ವಿಂಕಲ್ ಬೆಳಸಿದ ರೀತಿ ನನಗೆ ಸಂತೋಷಕೊಟ್ಟಿದೆ. ಅವನು ತುಂಬಾ ಸರಳ ಹುಡುಗ. ಆದರೆ ನನ್ನ ಮಗಳು ಬಟ್ಟೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾಳೆ ಎಂದರು.