ಪಾಟ್ನಾ:
ಕಳೆದೆರಡು ದಿನಗಳಿಂದ ಬಿಹಾರ ರಾಜಕೀಯದಲ್ಲಿ ಬೆಳವಣಿಗೆಯಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಅಧಿಕೃತವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಬಿಹಾರದಲ್ಲಿ ಜೆಡಿಯು- ಆರ್ ಜೆಡಿ ಸಖ್ಯ ಅಧಿಕೃತವಾಗಿ ಮುರಿದು ಬಿದ್ದಿದೆ.

ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿದ ನಿತೀಶ್ ಕುಮಾರ್ ಅವರು ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಪಾಟ್ನಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿದೆ.

ಬಿಹಾರದಲ್ಲಿ ಆರ್ ಜೆಡಿ – ಜೆಡಿಯು ಸರ್ಕಾರ ಪತನವಾಗಿದ್ದು, ನೂತನ ಜೆಡಿಯು- ಬಿಜೆಪಿ ಸರ್ಕಾರ ರಚನೆಯಾಗಲಿದೆ. ಈ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ರವಿವಾರ ಸಂಜೆಯೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಪಣತೊಟ್ಟಂತಿದ್ದ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಜತೆ ಮುಂಚೂಣಿಯಲ್ಲಿ ನಿಂತು ಇಂಡಿಯಾ ಮೈತ್ರಿಕೂಟ ರಚನೆಗೆ ಕಾರಣರಾಗಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತ್ತೆ ಬಿಜೆಪಿ ಜತೆಗೆ ನಿತೀಶ್ ಕುಮಾರ್ ಸೇರಿದ್ದಾರೆ.