ಲಕ್ನೋ:
ಉತ್ತರ ಪ್ರದೇಶದ ಕಾಶಿಯ ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ಈ ಹಿಂದೆ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಿಂದ ಬಹಿರಂಗ
ಗೊಂಡ ಬೆನ್ನಲ್ಲೇ ಅಲ್ಲಿ ಕನ್ನಡದ ಶಿಲಾಶಾಸನ ಕೂಡ ಪತ್ತೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಈಗ ಅದು ನಿಜ ಎಂದು ಸಾಬೀತಾ ಗಿದ್ದು, ಕನ್ನಡ ಶಾಸನದ ಚಿತ್ರ ಶನಿವಾರ ಬಿಡುಗಡೆಯಾಗಿದೆ.

ಮಸೀದಿಯಲ್ಲಿ ನಡೆದ ವೈಜ್ಞಾನಿಕ ಸಮೀಕ್ಷೆ ವೇಳೆ ದೇವ-ದೇವತೆಗಳ ಮೂರ್ತಿಗಳು, ಹಿಂದೂ ದೇವಾ ಲಯಕ್ಕೆ ಸಂಬಂಧಿಸಿದ ಹಲವು ವಸ್ತುಗಳು, ಕುರುಹುಗಳು ಪತ್ತೆಯಾಗುವುದರ ಜತೆಗೆ 34 ಶಿಲಾಶಾಸನಗಳು ಕೂಡ ಸಿಕ್ಕಿದ್ದವು. 2 ದಿನಗಳ ಹಿಂದಷ್ಟೇ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್‌ ಜೈನ್‌ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಈ ಪೈಕಿ ಕನ್ನಡ, ತೆಲುಗು, ಗ್ರಂಥ, ದೇವನಾಗರಿ ಭಾಷೆಯ ಶಾಸನ ಗಳೂ ಇದ್ದವು ಎಂದೂ ಅವರು ತಿಳಿಸಿದ್ದಾರೆ.

ತಜ್ಞರು ಏನನ್ನುತ್ತಾರೆ?
ಶನಿವಾರ ಈ ಕನ್ನಡ ಶಾಸನದ ಫೋಟೋ ಬಿಡುಗಡೆಯಾಗಿದ್ದು, ಅದರಲ್ಲಿ “ದೊಡರಸಯ್ಯನ ನರಸಂಣನಭಿಂನಹ’ ಎಂದು ಕೆತ್ತಿರುವುದು ಕಾಣಿಸುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇತಿಹಾಸ ತಜ್ಞ ಡಾ| ತಲಕಾಡು ಚಿಕ್ಕರಂಗೇಗೌಡ ಅವರು, “ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಕನ್ನಡ ಶಾಸನ ಸಿಕ್ಕಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ವಿಚಾರ. 16ನೇ ಶತಮಾನಕ್ಕೆ ಸೇರಿದ ಎರಡು ಸಾಲುಗಳ ಶಾಸನ ಇದಾಗಿದೆ. ಅಕ್ಷರಗಳ ಆಧಾರದ ಮೇಲೆ ಅದನ್ನು 16ನೇ ಶತಮಾನದ್ದು ಎಂದು ಹೇಳಬಹುದು. ಈ ಹಿಂದೆ ಕನ್ನಡದ ರಾಜರು ಉತ್ತರದ ಪ್ರಸಿದ್ಧ ದೇವಾಲಯಗಳಿಗೆ ದತ್ತಿ ಕೊಡುತ್ತಿದ್ದರು. ಆ ರೀತಿ ದತ್ತಿ ಕೊಟ್ಟಿರುವರಲ್ಲಿ ದೊಡ್ಡರಸಯ್ಯನ ಮಗ ನರಸಂಣ ಕೂಡ ಸೇರಿದ್ದಾನೆ. ಆತ ಸಾಧಾರಣ ವ್ಯಕ್ತಿಯಾಗಿರದೆ, ಕರ್ನಾಟಕದ ಯಾವುದಾದರೂ ಜಿಲ್ಲೆಯ ಪ್ರಸಿದ್ಧ ರಾಜ, ಪಾಳೆಗಾರ ಅಥವಾ ಸೇನಾಧಿಪತಿಯೇ ಆಗಿರುತ್ತಾನೆ. ದತ್ತಿ ಕೊಟ್ಟ ಕಾರಣಕ್ಕೆ ಅವರ ಹೆಸರನ್ನು ಉಲ್ಲೇಖೀಸಿದ್ದಾರೆ. ಈ ಶಾಸನ ಸರ್ವೇಗೆಪೂರಕವಾಗಲಿದೆ. ಮತ್ತಷ್ಟು ಕನ್ನಡದ ಶಾಸನಗಳು ಪತ್ತೆಯಾದರೂ ಅಚ್ಚರಿ ಇಲ್ಲ. ಈ ಬಗ್ಗೆ ರಾಜ್ಯ ಸರಕಾರ ಕಾಶಿಗೆ ವಿದ್ವಾಂಸರ ತಂಡವನ್ನು ಕಳುಹಿಸಿ ಮತ್ತಷ್ಟು ಸಂಶೋಧನೆಗೆ ಅವಕಾಶ ಕಲ್ಪಿಸಬೇಕು’ ಎಂದಿದ್ದಾರೆ.