ಚಿಕ್ಕಮಗಳೂರು :
ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ. ಮೋದಿ ಅವರಲ್ಲಿ ಯಾರೂ ಯಾವ ತಪ್ಪನ್ನೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅವರ ಮುಂದೆ ವಿರೋಧ ಪಕ್ಷವೇ ಇಲ್ಲ. ಅದು ನಮ್ಮ ಪ್ರಯತ್ನವಲ್ಲ ದೈವ ಸೃಷ್ಠಿ ಎಂದು ಆಧ್ಯಾತ್ಮ ಗುರು ದ್ವಾರಕನಾಥ ಹೇಳಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ಆಗಮಿಸಿದ್ದ ವೇಳೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೋದಿ ಅವರು ಮತ್ತೆ ಪ್ರಧಾನಿ ಆಗುವುದರಲ್ಲಿ ಸಂದೇಹ ಬೇಡ. ಅವರು ಯಾವ ಪುಣ್ಯವನ್ನು ಸಂಪಾದನೆ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಇನ್ನೂ ಎರಡು ವರ್ಷ ರಾಷ್ಟ್ರವನ್ನಾಳುವ ಶಕ್ತಿ ಇದೆ. 75 ವರ್ಷದ ವರೆಗೆ ಅಧಿಕಾರ ಎಂದು ಅವರೇ ಹೇಳಿದ್ದಾರೆ. ಅದನ್ನು ಅವರು ಉಲ್ಲಂಘನೆ ಮಾಡುವುದಿಲ್ಲ. ಅದು ಅವರ ಸ್ವಭಾವ. ಮುಂದೆ ಅವರು ರಾಷ್ಟ್ರಪತಿ ಆದರೂ ಆಗಬಹುದು. ದೇಶವನ್ನು ಚೆನ್ನಾಗಿ ಕಟ್ಟುವವರು ಬೇಕು. ಧರ್ಮವನ್ನು ದಡ ತಲುಪಿಸುವವರು ಬೇಕು ಎಂದರು.

ಇನ್ನೂ ವಿರೋಧ ಪಕ್ಷಕ್ಕೆ ಬಲ ಬಂದಿಲ್ಲ. 2028 ರ ಹೊತ್ತಿಗೆ ವಿರೋಧ ಪಕ್ಷಗಳಿಗೂ ಬಲ ಬರಲಿದೆ. ಈಗಲೂ ಅವರೇನು ಅಳಿಸಿ ಹೋಗುವುದಿಲ್ಲ. ಆದರೆ ಮೋದಿ ಅವರು ಪ್ರಧಾನಿ ಆಗುವುದನ್ನು ತಡೆಯಲಾಗುವುದಿಲ್ಲ ಎಂದರು.

 

ಈ ತಕ್ಷಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಬದಲಾಗುತ್ತಾರೆ ಎನ್ನುವುದು ಸಲ್ಲದ ಮಾತು. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಆಗುವುದಿಲ್ಲ ಎಂದರು. ನನ್ನ ಶಿಷ್ಯ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರ ಎನ್ನುವ ಪ್ರಶ್ನೆ ಇದೆ. ಆದರೆ ಅವರು ಆ ವ್ಯಕ್ತಿತ್ವವನ್ನು ಮೊದಲು ಚೆನ್ನಾಗಿ ಬೆಳಸಿಕೊಂಡು ಮುಖ್ಯಮಂತ್ರಿ ಆಗುವವರಿಗೆ ಏನೇನು ಗುಣಗಳಿರಬೇಕು ಅದಕ್ಕೆ ಬೆಲೆ ಕೊಟ್ಟು ಸುತ್ತ ಮುತ್ತ ಶುದ್ಧವಾದವರನ್ನ ಇಟ್ಟುಕೊಂಡು ಎಲ್ಲಾ ಶಾಸಕರ ಬೆಂಬಲ ಪಡೆಯುವ ವಿಶ್ವಾಸದಿಂದ ಕೆಲಸ ಮಾಡಬೇಕು. ಮುಂದೆ ಒಂದು ದಿನ ರಾಜ್ಯವನ್ನಾಳುವ ಶಕ್ತಿ, ಸಾಮರ್ಥ್ಯ ಇದೆ ಎಂದರು.