ರಾಜ್ಯದ ಅತ್ಯಂತ ಕುತೂಹಲಕಾರಿ ಕ್ಷೇತ್ರಗಳಲ್ಲಿ ಉಡುಪಿ ಚಿಕ್ಕಮಗಳೂರು ಸಹಾ ಒಂದು. ಕೊನೆಗೂ ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಾಂಗ್ರೆಸ್ ಪಕ್ಷದ ಪ್ರಬಲ ಅಭ್ಯರ್ಥಿ ಹಾಗೂ ಹಿರಿಯ ರಾಜಕಾರಣಿ ಕೆ. ಜಯಪ್ರಕಾಶ್ ಹೆಗಡೆ ಅವರನ್ನು ಸೋಲಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಆದರೆ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರು. ಒಟ್ಟಾರೆ ಸಮ್ಮಿಶ್ರ ಸ್ಥಿತಿಯಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಅತಿ ಹೆಚ್ಚು ಮತ ಪಡೆದು ಆಯ್ಕೆಯಾಗಿದ್ದಾರೆ. ಈ ಮೂಲಕ ಕರಾವಳಿ ಬಿಜೆಪಿ ಭದ್ರಕೋಟೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಬಿಜೆಪಿ ಇಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಿದ್ದರೆ ಗೆಲುವು ಕಠಿಣವಾಗುತ್ತಿತ್ತು. ಅಂತಹ ಸವಾಲನ್ನು ಕೋಟ ಶ್ರೀನಿವಾಸ್ ಪೂಜಾರಿ ಮೀರಿ ಮುನ್ನಡೆದಿದ್ದು ಮುಂದಿನ ದಿನಗಳಲ್ಲಿ ಕರಾವಳಿ ಹಾಗೂ ಮಲೆನಾಡಿನ ಜ್ವಲಂತ ಸಮಸ್ಯೆಗಳನ್ನು ಕೇಂದ್ರ ನಾಯಕರ ಗಮನಕ್ಕೆ ತಂದು ಈಡೇರಿಸುವ ಛಲವನ್ನು ಅವರು ತೋರಿಸಬೇಕಾಗಿದೆ.

 

ರಾಷ್ಟ್ರ ರಾಜಕಾರಣ ರಾಜ್ಯ ರಾಜಕಾರಣದ ಬಿಜೆಪಿ ಲೆಕ್ಕಾಚಾರಗಳಲ್ಲಿ ವ್ಯತ್ಯಾಸ ಆಗಿರಬಹುದು, ಆದರೆ ಪಕ್ಷದ ಶಕ್ತಿ ಕೇಂದ್ರ ಎನಿಸಿರುವ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಜಯ ಬಿಜೆಪಿಯ ಪಾಲಾಗಿದೆ! ನೇರ ಸ್ಪರ್ಧೆ- ತೀವ್ರ ಪೈಪೋಟಿ ಎಂದು ಭಾವಿಸಲಾಗಿದ್ದ ಈ ಕ್ಷೇತ್ರದಲ್ಲಿ, ಕೋಟ ಶ್ರೀನಿವಾಸ ಪೂಜಾರಿಯವರು 2,59,175 ಮತಗಳಿಂದ ಬಿಜೆಪಿಗೆ ದಾಖಲೆಯ ವಿಜಯ ತಂದುಕೊಟ್ಟಿದ್ದಾರೆ!

ಕೃಷ್ಣನೂರು ಉಡುಪಿಯಲ್ಲಿ ಅಯೋಧ್ಯಾ ರಾಮನ ಪ್ರತಿಷ್ಠಾಪನೆಯ ಋಣ ತೀರಿಸಿದ ಮತದಾರರು! ಹೌದು, ಈ ಕ್ಷೇತ್ರಕ್ಕೆ ಅನಿರೀಕ್ಷಿತ ಅಭ್ಯರ್ಥಿಯನ್ನು ಬಿಜೆಪಿ ಕೊಟ್ಟರೂ ದಾಖಲೆಯ ಜಯ ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ಪ್ರಬಲ ಎದುರಾಳಿ ಜಯಪ್ರಕಾಶ್ ಹೆಗ್ಡೆ ಅವರನ್ನು ಹಾಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರು ಅತಿಹೆಚ್ಚಿನ ಮತಗಳಿಂದ ಸೋಲಿಸಿದ್ದಾರೆ. ಸಂಪೂರ್ಣ ಪರಿಶ್ರಮ ಹಾಕಿ ಕಾಂಗ್ರೆಸ್ ಈ ಚುನಾವಣೆ ಎದುರಿಸಿದರೂ ಈ ಸಜ್ಜನರ ಕಣದಲ್ಲಿ, ಸರಳತೆಗೆ ಹೆಸರಾದ ಶ್ರೀನಿವಾಸ ಪೂಜಾರಿಯವರು ಜಯ ಪಡೆದಿದ್ದಾರೆ.

ಜಾತಿಗೂ ಜೈ ನೀತಿಗೂ ಜೈ: ಬಿಲ್ಲವ ಸಮುದಾಯಕ್ಕೆ ಸೇರಿದ ಕೋಟ ಶ್ರೀನಿವಾಸ ಪೂಜಾರಿ ಯವರನ್ನು ಸ್ವಜಾತೀಯ ಬಾಂಧವರು ಬಿಟ್ಟುಕೊಟ್ಟಿಲ್ಲ. ಬಂಟ ಮತ್ತು ಬಿಲ್ಲವ ಸಮುದಾಯಗಳು ಕರಾವಳಿಯ ಸಾಂಪ್ರದಾಯಿಕ ಎದುರಾಳಿಗಳು. ಜಯಪ್ರಕಾಶ್ ಹೆಗ್ಡೆಯವರಿಗೆ ಬಂಟ ಸಮುದಾಯದ ಮತಗಳು ಕ್ರೋಢೀಕರಣವಾಗಬಹುದು, ಎಂಬ ಊಹಾಪೋಹಗಳು ಚುನಾವಣಾ ಪೂರ್ವದಲ್ಲಿ ಮೂಡಿತ್ತು. ಇದು ಅರಿವಿಗೆ ಬರುತ್ತಲೇ ಬಿಲ್ಲವ ಸಮುದಾಯ ಸಾಮೂಹಿಕವಾಗಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬೆಂಬಲಿಸಿರುವುದು ಈ ಫಲಿತಾಂಶದಿಂದ ಖಚಿತವಾಗುತ್ತಿದೆ. ಹಿಂದುತ್ವ, ರಾಮ ಮಂದಿರ, ಮೋದಿ ಅಲೆ ಇತ್ಯಾದಿ ಪಕ್ಷದ ನೀತಿ ಸಿದ್ದಾಂತಗಳ ಜೊತೆಗೆ ಈ ಕ್ಷೇತ್ರದ ಬಿಲ್ಲವರು ಜಾತಿಗೂ ಜೈ ಎಂದಿರುವುದು ನಿಚ್ಚಳವಾಗಿದೆ. ಬಿಜೆಪಿಯ ಸಾಂಪ್ರದಾಯಿಕ ಮತಗಳ ಜೊತೆಗೆ, ಜಾತಿವಾರು ಮತದ ಕ್ರೋಡೀಕರಣವು ಕೋಟ ಶ್ರೀನಿವಾಸ ಪೂಜಾರಿಯವರ ಗೆಲುವಿಗೆ ಬೆಂಬಲವಾಗಿದೆ.

ಎಲ್ಲಾ ಸುತ್ತಿನಲ್ಲೂ ಕೋಟ ಮುಂದು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರದ ಮತಗಳನ್ನು 15 ರಿಂದ 19 ಸುತ್ತುಗಳಲ್ಲಿ ಎಣಿಕೆ ಮಾಡಲಾಗಿತ್ತು. ಪೋಸ್ಟಲ್ ವೋಟ್ ಜೊತೆಗೆ, ಎಲ್ಲಾ ಸುತ್ತುಗಳಲ್ಲೂ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮುನ್ನಡೆ ದಾಖಲಿಸಿದ್ದು ವಿಶೇಷವಾಗಿತ್ತು. ಎಲ್ಲಾ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವುದರ ಜೊತೆಗೆ, ಉಡುಪಿ ಮತ್ತು ಚಿಕ್ಕಮಗಳೂರಿನ ಎಲ್ಲಾ ಎಂಟು ಕ್ಷೇತ್ರಗಳಲ್ಲೂ ಶ್ರೀನಿವಾಸ ಪೂಜಾರಿ ಮುನ್ನಡೆ ಪಡೆದಿರುವುದು ಗಮನ ಸೆಳೆದಿದೆ. ಕ್ಷೇತ್ರವಾರು ಇವರು ಪಡೆದಿರುವ ಮುನ್ನಡೆಗಳ ವಿವರ ಹೀಗಿದೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಲೀಡ್ 50,095 ಮತಗಳು,ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಲೀಡ್ 43741, ಕಾಪು ಬಿಜೆಪಿ ಲೀಡ್ 32,130, ಕಾರ್ಕಳ ಬಿಜೆಪಿ ಲೀಡ್ 41747, ಉಡುಪಿ ಜಿಲ್ಲೆ ಒಂದರಲ್ಲೇ 1,67,713 ಲೀಡ್ ಬಿಜೆಪಿಗೆ ಆಗಿದೆ,ಚಿಕ್ಕಮಗಳೂರು ಜಿಲ್ಲೆಯಲ್ಲೂ ಬಿಜೆಪಿಗೆ ಬರೋಬ್ಬರಿ ಎಂಬತ್ತು ಸಾವಿರಕ್ಕೂ ಅಧಿಕ ಲೀಡ್ ಸಿಕ್ಕಿದೆ, ಶೃಂಗೇರಿ ವಿಧಾನಸಭಾ ಕ್ಷೇತ್ರ ಬಿಜೆಪಿ ಲೀಡ್ 25,238, ಮೂಡಿಗೆರೆ ವಿಧಾನಸಭಾ ಕ್ಷೇತ್ರ ಬಿಜೆಪಿ ಲೀಡ್ 20025 ತರೀಕೆರೆ 20681ಮತಗಳಲ್ಲಿ ಬಿಜೆಪಿ ಲೀಡ್ ಆಗಿದೆ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಲೀಡ್ 23793,

ಉಡುಪಿ ಚಿಕ್ಕಮಗಳೂರಿನಲ್ಲಿ ಗ್ಯಾರಂಟಿಗೆ ಇಲ್ಲ ವ್ಯಾರೆಂಟಿ: ವಿಧಾನಸಭಾ ಚುನಾವಣೆಯ ವೇಳೆಯೂ ಅಲೆಗೆ ವಿರುದ್ಧವಾಗಿ ಉಡುಪಿ ಜಿಲ್ಲೆಯ ಮತದಾರರು ಮತ ಚಲಾಯಿಸಿದ್ದರು. ಗ್ಯಾರೆಂಟಿ ಭರವಸೆಗಳಿಗೆ ರಾಜ್ಯದ ಇತರ ಕ್ಷೇತ್ರಗಳ ಜನ ಮಾರುಹೋಗಿದ್ದರೆ, ಉಡುಪಿ ಜಿಲ್ಲೆಯ ಮತದಾರರು ಮಾತ್ರ ಎಲ್ಲಾ ಐದು ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು ತಂದು ಕೊಟ್ಟಿದ್ದರು. ಆದರೆ ಚಿಕ್ಕಮಗಳೂರಿನ ಎಲ್ಲಾ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಆದರೆ ಈ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಮತದಾರರು ಕೂಡ ಉಡುಪಿಯ ಪ್ರಜ್ಞಾವಂತ ಮತದಾರರನ್ನು ಅನುಸರಿಸಿದ್ದಾರೆ. ಈ ಮೂಲಕ ಉಡುಪಿ ಚಿಕ್ಕಮಗಳೂರಿನಲ್ಲಿ ಗ್ಯಾರಂಟಿ ಯೋಜನೆಗೆ ವ್ಯಾರೆಂಟಿ ಇಲ್ಲ ಅನ್ನೋದು ಸಾಬೀತಾಗಿದೆ. ಉಡುಪಿ ಚಿಕ್ಕಮಗಳೂರು ಈ ಬಾರಿ ಎಂದಿನಂತೆ ಮತ್ತೊಮ್ಮೆ ಬಿಜೆಪಿಯ ಕೈ ಹಿಡಿದಿದೆ.

ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಆವರಣದಲ್ಲಿ ಕುಣಿದು ಕುಪ್ಪಳಿಸಿ ಜಯಕಾರ ಕೂಗಿದರು. ಶ್ರೀನಿವಾಸ ಪೂಜಾರಿಯವರ ಮನೆಯಲ್ಲೂ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಈವೇಳೆ ಮಾತನಾಡಿದ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ, ನಿರೀಕ್ಷೆಗೂ ಮೀರಿ ನನಗೆ ಮತ ಬಿದ್ದಿದೆ. ಕಾರ್ಯಕರ್ತರು ಮತ್ತು ನಾಯಕರ ಶ್ರಮ ಇದಕ್ಕೆ ಕಾರಣ. ದೇಶದಲ್ಲಿ ಇಂಡಿಯಾ ಕೂಟದವರು ನೀಡಿದ ಒಂದು ಲಕ್ಷ ರೂಪಾಯಿ ಭರವಸೆಗೆ ಜನ ಮಾರುಹೋಗಿದ್ದಾರೆ. ತಕ್ಕಮಟ್ಟಿಗೆ ಅವರ ತಂತ್ರಗಾರಿಕೆ ಫಲಿಸಿದಂತೆ ಕಾಣುತ್ತದೆ. ಆದರೆ ಎನ್ ಡಿ ಎ ಕೇಂದ್ರದಲ್ಲಿ ಸರ್ಕಾರ ರಚಿಸುತ್ತದೆ. ಮೋದಿ ನೇತೃತ್ವದಲ್ಲಿ ಉತ್ತಮ ಆಡಳಿತ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿ ಇಂಗ್ಲಿಷ್ ಕಲಿಯುತ್ತೇನೆ ಎಂದ ಕೋಟ: ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ವಿಚಾರವೊಂದು ಕೋಟ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಶ್ರೀನಿವಾಸ ಪೂಜಾರಿಯವರಿಗೆ ಹಿಂದಿ ಇಂಗ್ಲಿಷ್ ಬರಲ್ಲ ಎಂದು ಎದುರಾಳಿ ಸ್ಪರ್ಧಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದನ್ನು ಸ್ವಾಭಿಮಾನದ ಪ್ರಶ್ನೆಯಾಗಿ ಎತ್ತಿದ ಬಿಜೆಪಿ ಕಾರ್ಯಕರ್ತರು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಮಾಡಿದ್ದರು. ಗೆಲುವು ಸಾಧಿಸುತ್ತಿದ್ದಂತೆ ಕೋಟ ಶ್ರೀನಿವಾಸ ಪೂಜಾರಿ, ಇಂದಿನಿಂದ ಆರು ತಿಂಗಳಲ್ಲಿ ಹಿಂದಿ ಭಾಷೆಯನ್ನು ಕಲಿತು ಕ್ಷೇತ್ರದ ಜನರ ಸಮಸ್ಯೆಯನ್ನು ದೆಹಲಿಯಲ್ಲಿ ಪ್ರಶ್ನಿಸುವುದಾಗಿ ಭರವಸೆ ನೀಡಿದ್ದಾರೆ.