ಉಡುಪಿ :
ಕಟಪಾಡಿ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮತ್ತು ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಗೆ ಭಕ್ತರೊಬ್ಬರು ಅಪರೂಪದಲ್ಲೇ ಅಪರೂಪದ ಹರಕೆ ತೀರಿಸಿದ್ದಾರೆ.
ಕೊರಗಜ್ಜನಿಗೆ ಭಕ್ತಿಪೂರ್ವಕವಾಗಿ ಹರಕೆ ಹೊತ್ತವರಿಗೆ ಒಳ್ಳೆಯದಾಗಿದೆ. ಅಭೀಷ್ಟಗಳು ಈಡೇರಿವೆ ಎನ್ನುವ ನಂಬಿಕೆ ಇದೆ. ಕೊರಗಜ್ಜನ ನಂಬಿದ ಭಕ್ತರೊಬ್ಬರು 1002 ಬಾಟಲಿ ಮದ್ಯ ಸಮರ್ಪಿಸಿದ್ದಾರೆ.
ಉಡುಪಿಯ ಸಾಲಿಗ್ರಾಮದ ರವಿಚಂದ್ರ ಅವರು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಬಂದು ಇಲ್ಲಿಗೆ ಆಗಮಿಸಿ ಈ ಸೇವೆ ನೀಡಿದ್ದಾರೆ.
ರವಿಚಂದ್ರ ದಂಪತಿಗೆ ಮದುವೆಯಾಗಿ ಹಲವು ವರ್ಷಗಳ ಕಾಲ ಮಕ್ಕಳಾಗಿರಲಿಲ್ಲ. ಯಾರೋ ಒಬ್ಬರು ನೀಡಿದ ಸಲಹೆ ಫಲವಾಗಿ ಅವರು ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಮತ್ತು ಕೊರಗಜ್ಜ ದೈವಸ್ಥಾನಕ್ಕೆ ಬಂದು ಕೊರಗಜ್ಜ ಗುಡಿಯ ಮುಂದೆ ಸಂತಾನ ಪ್ರಾಪ್ತಿಗಾಗಿ ಕಣ್ಣೀರಿನ ಮನವಿ ಸಲ್ಲಿಸಿದ್ದರು. ಮಕ್ಕಳಾದರೆ 1002 ಬಾಟಲಿ ಮದ್ಯ ಒಪ್ಪಿಸುವುದಾಗಿ ದಂಪತಿ ಹರಕೆ ಹೊತ್ತುಕೊಂಡಿದ್ದರು.
ಈ ಘಟನೆಯಾಗಿ ಇದೀಗ ಒಂದು ವರ್ಷ ಕಳೆದಿದೆ. ರವಿಚಂದ್ರ ದಂಪತಿ ಬದುಕಿನಲ್ಲಿ ಈಗ ಪುಟ್ಟ ಮಗು ಬಂದಿದೆ. ಕೊರಗಜ್ಜ ಕೊಟ್ಟ ಪ್ರೀತಿಯ ಕಾಣಿಕೆ ಎನ್ನುವುದು ಅವರ ಬಲವಾದ ನಂಬಿಕೆ. ಮಗು ಹುಟ್ಟಿದ ಕೂಡಲೇ ಹರಕೆ ತೀರಿಸಬೇಕು ಎಂದು ರವಿಚಂದ್ರ ದಂಪತಿ ಬಯಸಿದ್ದರು. ಆದರೆ, ಇದ್ದ ಹಣ ಖರ್ಚಾಗಿತ್ತು. ಹಣ ಹೊಂದಾಣಿಕೆ ಮಾಡಲು ಸ್ವಲ್ಪ ಸಮಯ ಬೇಕಾಯಿತು.
ಕೊರಗಜ್ಜನ ಗುಡಿಯಲ್ಲಿ ಮದ್ಯ ಸಮರ್ಪಿಸಿದ ರವಿಚಂದ್ರ ದಂಪತಿ ಕುಟುಂಬ ಸಮೇತರಾಗಿ ಬಂದು 1002 ಮದ್ಯದ ಬಾಟಲಿಗಳನ್ನು ತಂದು ಹರಕೆ ಕಟ್ಟೆ ಮುಂದೆ ಜೋಡಿಸಿ ನಮಿಸಿದ್ದಾರೆ. ಕೊರಗಜ್ಜ ಸನ್ನಿಧಿಯಲ್ಲಿ ಇಷ್ಟೊಂದು ಪ್ರಮಾಣದ ಮದ್ಯದ ಹರಕೆ ಸಂದಾಯವಾಗಿರಲಿಲ್ಲವಂತೆ.
ಕೊರಗಜ್ಜನಿಗೆ ಶೇಂದಿ (ಕಳ್ಳು), ಬೀಡಾ, ಚಕ್ಕುಲಿ, ಮದ್ಯವನ್ನು ಹರಕೆಯಾಗಿ ನೀಡಲಾಗುತ್ತದೆ. ಸಾಮಾನ್ಯವಾಗಿ ಇದು ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ. ಹೀಗಾಗಿ ಈ ಹರಕೆಯನ್ನು ಮದ್ಯ ಕುಡಿಯುವ ಅಭ್ಯಾಸವಿರುವ ಭಕ್ತರಿಗೆ ನೀಡಲಾಗುತ್ತದೆ. ಇದನ್ನು ಜನರು ಭಕ್ತಿಯಿಂದ ಸ್ವೀಕರಿಸಿ ದೇವರ ಪ್ರಸಾದ ಎಂದು ನಂಬುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಇಷ್ಟೊಂದು ಬಾಟಲಿಗಳು ಬಂದಿರುವುದರಿಂದ ಅದನ್ನು ಏನು ಮಾಡಬೇಕು ಎನ್ನುವ ತೀರ್ಮಾನ ಆಗಿಲ್ಲ.