ಮುಂಬೈ: ಒಮ್ಮೆ ಕ್ಯಾನ್ಸರ್‌ಗೆ ತುತ್ತಾದವರು 2ನೇ ಬಾರಿ ಕ್ಯಾನ್ಸರ್‌ಗೆ ತುತ್ತಾಗುವುದನ್ನು ತಡೆಯಲು ಟಾಟಾ ಇನ್‌ಸ್ಟಿಟ್ಯೂಟ್ ಮಾತ್ರೆಯೊಂದನ್ನು ಅಭಿವೃದ್ಧಿ ಪಡಿಸಿದೆ. ಈ ಮಾತ್ರೆಯ ಬೆಲೆ ಕೇವಲ 100 ರು. ಎಂದು ಸಂಸ್ಥೆ ತಿಳಿಸಿದೆ.

ಕ್ಯಾನ್ಸರ್‌ಗೆ ತುತ್ತಾದವರು ರೇಡಿಯೇಶನ್ ಚಿಕಿತ್ಸೆಗೆ ಒಳಗಾದ ಬಳಿಕ ಕ್ಯಾನ್ಸರ್ ಕೋಶಗಳು ಆರೋಗ್ಯವಂತ ಕೋಶಗಳನ್ನು ಸೇರಿ ಅವುಗಳು ಕ್ಯಾನ್ಸರ್‌ಗೆ ತುತ್ತಾಗುವಂತೆ ಮಾಡುತ್ತಿದ್ದವು. ಆದರೆ ಈ ಮಾತ್ರೆ ತೆಗೆದುಕೊಳ್ಳುವುದರಿಂದ ಚಿಕಿತ್ಸೆಯ ಬಳಿಕ ವಿಘಟನೆಗೊಂಡ ಕ್ಯಾನ್ಸ‌ರ್ ಕೋಶಗಳು ನಾಶವಾಗಲಿವೆ. ಹೀಗಾಗಿ ರೋಗಿಯು 2ನೇ ಬಾರಿ ಕ್ಯಾನ್ಸರ್‌ಗೆ ತುತ್ತಾಗುವುದು ತಪ್ಪಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.

ಕ್ಯಾನ್ಸ‌ರ್ ಬರುವುದನ್ನು ತಡೆಯುವ ಮಾತ್ರೆಯನ್ನು ನಾವು ಅಭಿವೃದ್ಧಿ ಪಡಿಸಿರುವುದಾಗಿ ಭಾರತದ ಪ್ರಸಿದ್ಧ ಕ್ಯಾನ್ಸ‌ರ್ ಸಂಶೋಧನಾ ಸಂಸ್ಥೆ ಟಾಟಾ ಸ್ಮಾರಕ ಕೇಂದ್ರ (TMC) ಹೇಳಿದೆ.

ಟಾಟಾ ವೈದ್ಯರು ಸುಮಾರು ಒಂದು ದಶಕದಿಂದ ಈ ಮಾತ್ರೆಯ ಮೇಲೆ ಸಂಶೋಧನೆ ಮಾಡುತ್ತಿದ್ದು ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅನುಮೋದನೆಗೆ ಕಾಯತ್ತಿದ್ದಾರೆ. ಈಗಾಲೇ ಟಿಐಎಫ್‌ಆರ್ ವಿಜ್ಞಾನಿಗಳು ಈ ಮಾತ್ರೆಯನ್ನು ಅನುಮೋದಿಸಲು ಎಫ್‌ಎಸ್‌ಎಸ್‌ಎಐಗೆ ಅರ್ಜಿ ಸಲ್ಲಿಸಿದ್ದಾರೆ. ಅನುಮೋದನೆ ಪಡೆದ ನಂತರ ಜೂನ್- ಜುಲೈನಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯೋಗಕ್ಕಾಗಿ ಇಲಿಯನ್ನು ಬಳಸಿಕೊಂಡಿದ್ದು, ಮೊದಲಿಗೆ ಕ್ಯಾನ್ಸರ್ ಕೋಶಗಳನ್ನು ಒಳಸೇರಿಸಿ ಕ್ಯಾನ್ಸರ್‌ಗೆ ತುತ್ತಾಗುವಂತೆ ಮಾಡಲಾಯಿತು. ಬಳಿಕ ರೇಡಿಯೇಶನ್ ಚಿಕಿತ್ಸೆ ನೀಡಿ ಕ್ಯಾನ್ಸರ್ ಗುಣಪಡಿಸಿ, ಕೆಲವು ಇಲಿಗಳಿಗೆ ಈ ಮಾತ್ರೆ ತಿನ್ನಿಸಲಾಗಿದೆ. ಮಾತ್ರೆ ತಿಂದ ಇಲಿಗಳಲ್ಲಿ 2ನೇ ಬಾರಿ ಕ್ಯಾನ್ಸರ್ ಕಾಣಿಸಿಕೊಂಡಿಲ್ಲ.
ವೈದ್ಯರು ಇಲಿಗಳಿಗೆ ರೆಸ್ಟೆರಾಟ್ರೋಲ್ ಮತ್ತು ತಾಮ್ರದ (R+Cu) ಪ್ರೊ- ಆಕ್ಸಿಡೆಂಟ್ ಮಾತ್ರೆಗಳನ್ನು ನೀಡಲಾಯಿತು. R+Cu ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ, ಇದು ಕ್ರೋಮಾಟಿನ್ ಕಣಗಳನ್ನು ನಾಶಪಡಿಸುತ್ತದೆ ಎಂದು ತಿಳಿದು ಬಂದಿದೆ.ಅಡ್ಡಪರಿಣಾಮಗಳನ್ನು 50% ರಷ್ಟು ಮಾತ್ರೆ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷದಿಂದ ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ಮಾತ್ರೆಯ ಬೆಲೆ ಕೇವಲ 100 ರೂ. ಇರಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.