ಘಟಪ್ರಭಾ :
ಘಟಪ್ರಭಾ ಪಟ್ಟಣದಲ್ಲಿ ಭ್ರೂಣ ಹತ್ಯೆಯಾಗಿರುವ ವಿಷಯ ಭಾನುವಾರ (ದಿ.24) ಮಧ್ಯಾಹ್ನ ಬೆಳಕಿಗೆ ಬಂದಿದೆ.
ವಿಷಯ ಪಟ್ಟಣದಲ್ಲಿ ಹರದಾಡಿ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದರು.
ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ಪಟ್ಟಣದ ಕಲಾಲ ಓಣಿಯಲ್ಲಿರುವ (ಮಟನ್ ಮಾರ್ಕೇಟ್) ಚರಂಡಿಯಲ್ಲಿ ನವಜಾತ ಶಿಶುವಿನ ಶವವನ್ನು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿ ಎಸೆದು ಹೋಗಿದ್ದಾರೆ. ಸಾರ್ವಜನಿಕರಿಂದ ಮಾಹಿತಿ ಸಿಕ್ಕ ತಕ್ಷಣ ಪಟ್ಟಣದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿದ್ದಾರೆ. ಪುರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಗಟಾರನಲ್ಲಿ ಪತ್ತೆಯಾಗಿರುವ ಭ್ರೂಣ ಗಂಡು ಮಗುವಿಂದಾಗಿದ್ದು, ಸುಮಾರು ಏಳು ತಿಂಗಳು ಭ್ರೂಣ ಇದಾಗಿರಬಹುದೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಏಳು ತಿಂಗಳು ಗಂಡು ಮಗುವಿನ ಭ್ರೂಣ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆಲ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು, ಇದು ಪಟ್ಟಣದಲ್ಲಿ ನಡೆಯುತ್ತಿರುವ ಅನಧಿಕೃತ ಗರ್ಭಪಾತದ ಕರಾಳ ದಂಧೆಯ ಭಾಗವಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.
ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸಸ್ಥರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಘಟಪ್ರಭಾ ಠಾಣೆಯಲ್ಲಿ ದೂರು ದಾಖಲಾಗಿದೆ.