ಬೆಂಗಳೂರು: ಲೈಂಗಿಕ ದೌರ್ಜನ್ಯ, ಮತ್ತು ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಜೆಡಿಎಸ್ ಸಂಸದ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಕೊನೆಗೂ ಎಸ್ಐಟಿ ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ. ವಿಡಿಯೊಗಳು ವೈರಲ್ ಆಗುತ್ತಲೇ ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್ ರೇವಣ್ಣ, ಶುಕ್ರವಾರ (ಮೇ 31) ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಬಂಧನಕ್ಕೆ ಒಳಗಾಧರು.
ಜರ್ಮನಿಯ ಮ್ಯೂನಿಚ್ನಿಂದ ಮಧ್ಯಾಹ್ನ ಹೊರಟ ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ರೇವಣ್ಣ ಆಗಮಿಸಿದರು. ಸಂಸದರಾಗಿರುವ ಕಾರಣ ಹಲವು ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ಎಸ್ಐಟಿ ಅಧಿಕಾರಿಗಳ ವಶಕ್ಕೆ ಪಡೆದರು.
ಪ್ರಜ್ವಲ್ ರೇವಣ್ಣ ನೇರವಾಗಿ ಎಸ್ಐಟಿ ವಶಕ್ಕೆ ಸಿಗಲಿಲ್ಲ. ರಾಜತಾಂತ್ರಿಕ ಪಾಸ್ ಪೋರ್ಟ್ ಇದ್ದ ಕಾರಣ ಅವರನ್ನು ನೇರವಾಗಿ ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಲೋಕಸಭಾ ಸ್ಪೀಕರ್ ಗೆ ಮನವಿ ಮಾಡಿದ ವಲಸೆ ಅಧಿಕಾರಿಗಳು ಅನುಮತಿ ಪಡೆದುಕೊಂಡಿದ್ದರು. ಅಂತೆಯ ಪ್ರಕರಣಕ್ಕೆ ಸಂಬಂಧಿಸಿದ 55 ಪುಟಗಳ ದಾಖಲೆಗಳನ್ನು ತಂದು ಎಸ್ಐಟಿ ಮುಖ್ಯಸ್ಥ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲರ ಮುಂದೆ ಸಹಿ ಹಾಕಲಾಯಿತು. ಅಲ್ಲಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಜ್ವಲ್ ರೇವಣ್ಣ ವಿಮಾನದಿಂದಿಳಿದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರಕ್ರಿಯೆ ನಡೆಯಿತು.
ಅತ್ಯಾಚಾರ ಆರೋಪ ಕೇಳಿಬಂದ ಬೆನ್ನಲ್ಲಿಯೇ ವಿದೇಶದಲ್ಲಿಯೇ ಉಳಿದುಕೊಂಡು ಪೊಲೀಸರ ಕೈಗೆ ಸಿಗದೇ ಒಂದು ತಿಂಗಳ ಕಾಲ ತಪ್ಪಿಸಿಕೊಂಡಿದ್ದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ಬಂದರು. ಪ್ರಜ್ವಲ್ ಇರುವ ವಿಮಾನವನ್ನು ಎರಡು ಸಾವಿರಕ್ಕೂ ಹೆಚ್ಚು ಜನ ಟ್ರ್ಯಾಕ್ ಮಾಡುತ್ತಿದ್ದರು.
ಮ್ಯೂನಿಚ್ನಿಂದ ಬೆಂಗಳೂರಿಗೆ ವಿಮಾನದಲ್ಲಿ ಮೇ 30ರ ಮಧ್ಯರಾತ್ರಿ 12.30ಕ್ಕೆ ಆಗಮಿಸುವ ವೇಳೆಯೂ ಸುಮಾರು 2,000ಕ್ಕೂ ಅಧಿಕ ಜನರು ನಿದ್ದೆಗೆಟ್ಟು ಅವರ ವಿಮಾನವನ್ನು ಟ್ರ್ಯಾಕ್ ಮಾಡುತ್ತಿದ್ದರು.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿಯಿಂದಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಾನು ಮೇ 31ರಂದು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು.
ಜರ್ಮನಿಯ ಮ್ಯೂನಿಚ್ನಿಂದ ಮೇ 30ರ ರಾತ್ರಿ ಬೆಂಗಳೂರಿಗೆ ಬರುವುದಕ್ಕೆ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ (ಜರ್ಮನಿ ಕಾಲಮಾನ ಬೆಳಗ್ಗೆ 11 ಗಂಟೆ) ವಿಮಾನದಲ್ಲಿ ಮಧ್ಯರಾತ್ರಿ ಬೆಂಗಳೂರಿನಲ್ಲಿ ಬಂದಿಳಿದಿದ್ದರು. ಆದರು ಜನ ನಿದ್ದೆಗೆಟ್ಟು ಟಿವಿ ಹಾಗೂ ಸಾಮಾಜಿಕ ಜಾಲತಾಣವನ್ನು ವೀಕ್ಷಿಸಿದರು. ರಾಷ್ಟ್ರೀಯ ಮಾಧ್ಯಮಗಳು ಸಹ ಪ್ರಜ್ವಲ್ ಅವರ ಸುದ್ದಿಯನ್ನೇ ಪ್ರಮುಖವಾಗಿ ಪ್ರಸಾರ ಮಾಡಿತು.