ವಾರಾಣಸಿ: 2024ರ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ, ಮೂರನೇ ಅವಧಿಗೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಪ್ರಧಾನಿ ಮೋದಿಯವರು ಪ್ರತಿನಿಧಿಸುತ್ತಿರುವ ವಾರಾಣಸಿ ಕ್ಷೇತ್ರದಲ್ಲಿ ಜೂನ್ 1 ರಂದು ಲೋಕಸಭೆ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ.
ಸತತ ಮೂರನೇ ಬಾರಿಗೆ ತಮ್ಮ ಪಕ್ಷದ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಸಂಸತ್ತಿನ ಚುನಾವಣೆಯ ಫಲಿತಾಂಶ ಘೋಷಣೆ ನಂತರ ಮುಂದಿನ ತಿಂಗಳು ಜಿ -7 ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಧಾನಿ ಮೋದಿ ಗಂಗಾನದಿಯ ದಶಾಶ್ವಮೇಧ ಘಾಟ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಘಾಟ್‌ಗೆ ಕ್ರೂಸ್ ಹತ್ತುವ ಮುನ್ನ ಸ್ನಾನ ಮಾಡಿದರು. ಇಂದು ಗಂಗಾ ಸಪ್ತಮಿಯ ಶುಭ ದಿನವಾಗಿದ್ದು, ಘಾಟ್‌ನಲ್ಲಿ ಗಂಗಾ ಆರತಿ ಮಾಡಿದರು. ನಂತರ ಕಾಲ ಭೈರವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ವಾರಾಣಸಿ ಕ್ಷೇತ್ರ ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ಮೋದಿಯವರ ಭದ್ರಕೋಟೆಯಾಗಿದೆ. ಅವರು 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಎರಡು ಬಾರಿ ಗೆದ್ದಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ ರೈ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಲೋಕಸಭೆಯಲ್ಲಿ ಅಜಯ ರೈ ಅವರು ಪ್ರಧಾನಿ ಮೋದಿ ಅವರನ್ನು ಎದುರಿಸುತ್ತಿರುವುದು ಇದು ಮೂರನೇ ಬಾರಿ.
2019 ರ ಲೋಕಸಭಾ ಚುನಾವಣೆಯಲ್ಲಿ, ಮೋದಿ ಅವರು 6,74,664 ಕ್ಕೂ ಹೆಚ್ಚು ಮತಗಳೊಂದಿಗೆ ಗೆದ್ದಿದ್ದರು. ಶೇಕಡಾ 63.6 ರಷ್ಟು ಮತಗಳನ್ನು ಗಳಿಸಿದ್ದರು. 2014 ರಲ್ಲಿ, ಪ್ರಧಾನಿ ಮೋದಿ ಗುಜರಾತ್‌ನ ವಡೋದರಾ ಮತ್ತು ಉತ್ತರ ಪ್ರದೇಶದ ವಾರಾಣಸಿಯಿಂದ ಎರಡು ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಿದ್ದರು.