ಬೆಂಗಳೂರು: ಸಂಸದ ಪ್ರಜ್ವಲ್​ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಆರೋಪಿತ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇಲೆ ಎಸ್ ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಎಚ್.​ಡಿ. ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಇಂದು ಮಂಗಳವಾರ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ರೇವಣ್ಣ ಅವರು ಬಿಡುಗಡೆಯಾಗುತ್ತಿದ್ದಂತೆ, ಅವರ ಅಭಿಮಾನಿಗಳು ಜಯ ಘೋಷಣೆ ಹಾಕಿ ಸಂಭ್ರಮಿಸಿದರು. ಕಾರಾಗೃಹದ ಮುಂದೆ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್​ ಮಾಡಬೇಕಾಯಿತು.
ಮೇ 4ರಂದು ತಮ್ಮ ತಂದೆ ಹೆಚ್ ಡಿ ದೇವೇಗೌಡರ ನಿವಾಸದಲ್ಲಿಯೇ ಎಸ್ ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ರೇವಣ್ಣ ಜೈಲಿಂದ ಹೊರಬಂದ ನಂತರ ನೇರವಾಗಿ ದೇವೇಗೌಡರ ನಿವಾಸಕ್ಕೆ ಆಗಮಿಸಿ ತಂದೆ-ತಾಯಿ ಆಶೀರ್ವಾದ ಪಡೆದರು.

ಕಳೆದ ಮೇ 4ರಂದು ಎಚ್‌.ಡಿ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲೇ ಬಂಧಿಸಿದ್ದರು. ಇದೀಗ ದೇವೇಗೌಡರ ನಿವಾಸಕ್ಕೆ ತೆರಳಿರುವ ರೇವಣ್ಣ ತಂದೆ, ತಾಯಿ ಆಶೀರ್ವಾದ ಪಡೆದಿದ್ದಾರೆ.
ಜೆಡಿಎಸ್ ಶಾಸಕ ಎಚ್‌.ಡಿ ರೇವಣ್ಣ ಅವರಿಗೆ ನ್ಯಾಯಾಲಯ ಸೋಮವಾರವೇ ​ಷರತ್ತುಬದ್ಧ ಜಾಮೀನು ನೀಡಿತ್ತು. ಜಾಮೀನು ನೀಡುವಷ್ಟರಲ್ಲಿ ನ್ಯಾಯಾಲಯದ ಸಮಯ ಆಗಿದ್ದರಿಂದ ಕೋರ್ಟ್​ ಪ್ರಕ್ರಿಯೆಗಳನ್ನು ಇಂದು ಮಂಗಳವಾರ (ಮೇ 14) ಮುಂದೂಡಲಾಗಿತ್ತು. ಹೀಗಾಗಿ ಎಚ್​ ಡಿ ರೇವಣ್ಣ ಸೋಮವಾರದ ರಾತ್ರಿಯನ್ನು ಜೈಲಿನಲ್ಲೇ ಕಳೆದರು. ಮಂಗಳವಾರ ಕೋರ್ಟ್​​ ಪ್ರಕ್ರಿಯೆಗಳು ಮುಗಿದ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.