ಬೆಳಗಾವಿ :
ನಾನು ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ. ವಿಧಾನ ಪರಿಷತ್ ಸದಸ್ಯನಾಗಿ ಮುಂದುವರೆಯುತ್ತೇನೆ. ಹೈಕಮಾಂಡ್‌ ಹೇಳಿದಂತೆ ಕೇಳಲು ನಾನೇನು ಫುಟ್‌ಬಾಲೇ? ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಪ್ರಶ್ನಿಸಿದರು.

ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2014ರಲ್ಲಿ ರಾಜ್ಯದಲ್ಲಿ ಸಚಿವ ಇದ್ದಾಗ ಒಮ್ಮೆ ಒದ್ದರು ದೆಹಲಿಗೆ ಹೋಗಿ ಬಿದ್ದೆ. ಅಲ್ಲಿಂದ ಒದ್ದರು ವಿಧಾನ ಪರಿಷತ್‌ಗೆ ಬಂದೆ. ಈಗ ಮತ್ತೆ ಒದೆಯಲು ಮುಂದಾಗಿದ್ದಾರೆ. ಮತ್ತೆ ದೆಹಲಿಗೆ ಹೋಗಿ ಬೀಳಬೇಕೆ? ಎಂದು ಹೇಳಿದರು.

ಹೈಕಮಾಂಡ್‌ ಹೇಳಿದರೂ ಸ್ಪರ್ಧಿಸುವುದಿಲ್ಲ. ಹೈಕಮಾಂಡ್‌ ಹೇಳಿದ ತಕ್ಷಣ ಹೋಗಲು ಇದೇನು ಫುಟ್‌ಬಾಲ್‌ ರಾಜ್ಯವೇ? ವರ್ಷಕ್ಕೊಮ್ಮೆ ಎತ್ತ ಬೇಕಾದತ್ತ ಒದ್ದರೆ ನಾನು ಒದೆಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಹೇಳಿದರೂ ನಿಲ್ಲುವುದಿಲ್ಲ. ಅವರು ಹೇಳಿದ ತಕ್ಷಣ ನಿಲ್ಲುತ್ತೇನೆ ಎಂದು ನಾನೇನು ಬರೆದು ಕೊಟ್ಟಿದ್ದೇನೆಯೇ? ಎಂದು ಪ್ರಶ್ನಿಸಿದರು.

ಲೋಕಸಭೆಗೆ ಪ್ರಕಾಶ ಹುಕ್ಕೇರಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಅದು ಸತ್ಯಕ್ಕೆ ದೂರ. ನನ್ನನ್ನು ಶಿಕ್ಷಕರು ಆಯ್ಕೆ ಮಾಡಿದ್ದಾರೆ. ಇನ್ನೂ ಐದು ವರ್ಷ ಅವರ ಸೇವೆ ಮಾಡುತ್ತೇನೆ. ಯಾರಿಂದ ಎಷ್ಟೇ ಒತ್ತಡ ಬಂದರೂ ನಾನು ಸ್ಪರ್ಧಿಸುವುದಿಲ್ಲ. ಹೈಕಮಾಂಡ್‌ ನನ್ನ ಮೇಲೆ ಒತ್ತಡ ಹೇರಬಾರದು ಎಂದರು