ಅಯೋಧ್ಯೆ :
ಅಯೋಧ್ಯೆಯ ಪರಮ ಪವಿತ್ರ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದ ವಿಧ್ಯುಕ್ತವಾಗಿ ಆರಂಭವಾಗಲಿದೆ. ಜನವರಿ 16ರಿಂದ ಜನವರಿ 22ರವರೆಗೂ ರಾಮ ಮಂದಿರ ಉದ್ಘಾಟನೆಯ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮ ದಿನ ರಾಮ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದ್ದು, ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಲಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕಾರ್ಯಕ್ರಮವು ಅಧಿಕೃತವಾಗಿ ಆರಂಭವಾಗಲಿದೆ. ಜನವರಿ 23ರಿಂದ ಭಕ್ತರಿಗೆ ರಾಮ ಮಂದಿರವು ಮುಕ್ತವಾಗಲಿದೆ ಎಂದು ತಿಳಿದು ಬಂದಿದೆ.
ಜನವರಿ 22 ಮಕರ ಸಂಕ್ರಾಂತಿಯ ನಂತರ ಬರುತ್ತದೆ. ಮಕರ ಸಂಕ್ರಾಂತಿ ಉತ್ತರದ ಕಡೆಗೆ ಸೂರ್ಯನ ಚಲನೆಯನ್ನು ಗುರುತಿಸುವ ಮಹತ್ವದ ಹಿಂದೂ ಪರ್ವ. ಇಲ್ಲಿಂದ ಬಳಿಕ ಉತ್ತರಾಯಣ. ಇದು ಮಂಗಳಕರ, ಬೆಳವಣಿಗೆ ಮತ್ತು ಹೊಸ ಆರಂಭದ ಸಮಯವೆಂದು ಪರಿಗಣಿಸಲಾಗಿದೆ.
ಶುಕ್ಲ ಪಕ್ಷದ ದ್ವಾದಶಿ ತಿಥಿ: ವಿಶೇಷವಾಗಿ ಶುಕ್ಲ ಪಕ್ಷ ಮತ್ತು ದ್ವಾದಶಿ ತಿಥಿ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ದಿನ. ಶುಕ್ಲ ಪಕ್ಷವು ಚಂದ್ರನ ಬೆಳವಣಿಗೆಯ ಹಂತವಾಗಿದೆ. ಇದು ಚಂದ್ರನ ಹೆಚ್ಚುತ್ತಿರುವ ಪ್ರಕಾಶದೊಂದಿಗೆ ಸಂಬಂಧಿಸಿದೆ. ಬೆಳವಣಿಗೆ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ. ಹೊಸ ಉದ್ಯಮಗಳು, ಯೋಜನೆಗಳು ಅಥವಾ ಸಮಾರಂಭಗಳನ್ನು ಪ್ರಾರಂಭಿಸಲು ಶುಕ್ಲ ಪಕ್ಷ ಅತ್ಯಂತ ಮಂಗಳಕರ. ದ್ವಾದಶಿ ತಿಥಿಯು ಸ್ಥಿತಿಕರ್ತನಾದ, ರಕ್ಷಕನಾದ ಭಗವಾನ್ ವಿಷ್ಣುವಿಗೆ ಸಂಬಂಧಿಸಿದೆ. ಭಗವಾನ್ ರಾಮನು ವಿಷ್ಣುವಿನ ಏಳನೆಯ ಮತ್ತು ಅತ್ಯಂತ ಜನಪ್ರಿಯ ಅವತಾರ. ಈ ತಿಥಿಯಂದು ಮಂದಿರವನ್ನು ಉದ್ಘಾಟನೆ ಮಾಡುವುದು ವಿಷ್ಣುವಿನ ದೈವಿಕ ಉಪಸ್ಥಿತಿಯನ್ನು ಆಹ್ವಾನಿಸುವ ಸಂಕೇತ.
ಮೃಗಶೀರ್ಷ ನಕ್ಷತ್ರ: ಅಂದು ಮೃಗಶಿರಾ ನಕ್ಷತ್ರದಲ್ಲಿ ಚಂದ್ರನು ವೃಷಭ ರಾಶಿಯಲ್ಲಿರುತ್ತಾನೆ. ವೃಷಭ ರಾಶಿಯು ಸ್ಥಿರತೆ, ಭದ್ರತೆ ಮತ್ತು ವಸ್ತು ಸಂಪತ್ತಿಗೆ ಸಂಬಂಧಿಸಿದ ಸಂಕೇತ. ಇದು ರಾಮಮಂದಿರದ ಉದ್ಘಾಟನೆಗೆ ಪ್ರಶಸ್ತ. ಇದು ದೇವಾಲಯವು ಸ್ಥಿರ ಮತ್ತು ಸಮೃದ್ಧವಾಗಲಿದೆ ಎಂದು ಸೂಚಿಸುತ್ತದೆ. ಈ ದಿನ ಚಂದ್ರನು ಮೃಗಶಿರಾ ನಕ್ಷತ್ರದಲ್ಲಿ ಇರುತ್ತಾನೆ. ಹೊಸ ಉದ್ಯಮಗಳನ್ನು ಕೈಗೊಳ್ಳಲು ಮತ್ತು ಯಶಸ್ಸನ್ನು ಸಾಧಿಸಲು ಇದು ಪ್ರಬಲ ನಕ್ಷತ್ರ.
ಉತ್ತರಾಷಾಢ ನಕ್ಷತ್ರದಲ್ಲಿ ಸೂರ್ಯ: ಜನವರಿ 22ರಂದು ಸೂರ್ಯನು ಉತ್ತರ ಆಷಾಢ ನಕ್ಷತ್ರ ಮತ್ತು ಮಕರ ರಾಶಿಯಲ್ಲಿ ಇರುತ್ತಾನೆ. ಉತ್ತರ ಆಷಾಢವು ನಾಯಕತ್ವ, ಶಕ್ತಿ ಮತ್ತು ಯಶಸ್ಸಿಗೆ ಸಂಬಂಧಿಸಿದ ನಕ್ಷತ್ರ. ಇದು ಉದ್ಘಾಟನೆಗೆ ಅತ್ಯಂತ ಮಂಗಳಕರ. ಈ ದೇವಾಲಯವು ಭಾರತವನ್ನು ಜಾಗತಿಕ ಆಧ್ಯಾತ್ಮಿಕ ನಾಯಕನಾಗಿ ಬಿಂಬಿಸುತ್ತದೆ.
ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗ: ಈ ಎರಡೂ ಯೋಗಗಳನ್ನು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಂಗಳಕರವಾದ ಜ್ಯೋತಿಷ್ಯ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ. ಜನವರಿ 22ರಂದು ಅವುಗಳ ಉಪಸ್ಥಿತಿಯು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ದೀರ್ಘಾಯುಷ್ಯ, ಸಮೃದ್ಧಿ ಮತ್ತು ಆಶೀರ್ವಾದಗಳನ್ನು ಪ್ರತಿನಿಧಿಸುತ್ತದೆ. ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ದೈವಿಕ ಅನುಗ್ರಹದೊಂದಿಗೆ ಸಹ ಸಂಬಂಧ ಹೊಂದಿವೆ.
22ರ ಪ್ರಾಮುಖ್ಯತೆ: ದಿನದ ಸಂಖ್ಯೆ 22. ಸಂಖ್ಯಾಶಾಸ್ತ್ರದಲ್ಲಿ 22 ಅನ್ನು ʼಮಾಸ್ಟರ್ ಬಿಲ್ಡರ್ʼ ಅಥವಾ ʼಮಾಸ್ಟರ್ ಟೀಚರ್ʼ ಸಂಖ್ಯೆ ಎಂದು ಉಲ್ಲೇಖಿಸಲಾಗುತ್ತದೆ. ಇದು ಕನಸುಗಳನ್ನು ರಿಯಾಲಿಟಿ ಆಗಿ ಪರಿವರ್ತಿಸುವ ಸಾಮರ್ಥ್ಯವನ್ನು ಸಂಕೇತಿಸುತ್ತದೆ. ದೊಡ್ಡ ಪ್ರಮಾಣದಲ್ಲಿ ಕಲ್ಪನೆಗಳನ್ನು ವ್ಯಕ್ತಪಡಿಸುತ್ತದೆ. 22ನೇ ಸಂಖ್ಯೆಗೆ ಸಂಬಂಧಿಸಿದ ವ್ಯಕ್ತಿಗಳು ಜಗತ್ತಿನಲ್ಲಿ ಧನಾತ್ಮಕ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ನಂಬಲಾಗಿದೆ. ದಿನಾಂಕದ ಒಟ್ಟು ಮೊತ್ತ (22 + 1 + 2024) 31 ಆಗಿದೆ, ಇದನ್ನು ಕೂಡಿಸಿದಾಗ 4 (3 + 1) ಸಿಗುತ್ತದೆ. ಸಂಖ್ಯೆ 4 ಸ್ಥಿರತೆ, ಪ್ರಾಯೋಗಿಕತೆ ಮತ್ತು ಬಲವಾದ ಅಡಿಪಾಯದೊಂದಿಗೆ ಸಂಬಂಧಿಸಿದೆ.
ಜನವರಿ 16
ದೇವಸ್ಥಾನದ ಟ್ರಸ್ಟ್ ನೇಮಿಸಿದ ಆತಿಥೇಯರಿಂದ ಸರಯೂ ನದಿಯ ದಡದಲ್ಲಿ ದಶವಿದ್ ಸ್ನಾನ, ವಿಷ್ಣು ಪೂಜೆ ಮತ್ತು ಗೋದಾನ.
ಜನವರಿ 17
ರಾಮಲಲ್ಲಾ ಮೂರ್ತಿಯೊಂದಿಗೆ ಅಯೋಧ್ಯೆಯಲ್ಲಿ ಮೆರವಣಿಗೆ ನಡೆಯಲಿದ್ದು, ಭಕ್ತರು ಮಂಗಲ ಕಲಶದಲ್ಲಿ ಸರಯು ಜಲವನ್ನು ಹೊತ್ತು ದೇವಸ್ಥಾನಕ್ಕೆ ಬರಲಿದ್ದಾರೆ.
ಜನವರಿ 18
ಗಣೇಶ ಅಂಬಿಕಾ ಪೂಜೆಗಳೊಂದಿಗೆ ಔಪಚಾರಿಕ ಪೂಜಾ ವಿಧಿ ವಿಧಾನಗಳು ಶುರುವಾಗಲಿವೆ. ವರುಣ ಪೂಜೆ, ಮತ್ರಿಕಾ ಪೂಜೆ, ಬ್ರಾಹ್ಮಿಣ್ ವರನ್, ವಾಸ್ತು ಪೂಜೆ ಸೇರಿದಂತೆ ವಿವಿಧ ಪೂಜೆ ಕಾರ್ಯಕ್ರಮಗಳು ನಡೆಯಲಿವೆ.
ಜನವರಿ 19
ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಜನವರಿ 20
ದೇವಾಲಯದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆದ ನಂತರ ವಾಸ್ತು ಶಾಂತಿ ಪೂಜಾ ವಿಧಿವಿಧಾನಗಳು ನಡೆಯಲಿವೆ.
ಜನವರಿ 21
125 ಕಲಶಗಳಿರುವ ದೈವ ಸ್ನಾನದ ನಂತರ ಶಯಾಧಿವಾಸ ನಡೆಯಲಿದೆ.
ಜನವರಿ 22
ಬೆಳಗಿನ ಪೂಜೆಯ ನಂತರ ಮಧ್ಯಾಹ್ನ ಮೃಗಶಿರ ನಕ್ಷತ್ರದಲ್ಲಿ ರಾಮಲಲ್ಲಾ ದೇವರ ಪ್ರತಿಷ್ಠಾಪನೆ ನಡೆಯಲಿದೆ.
ಸಂಗೀತ ಕಾರ್ಯಕ್ರಮ :
ಉತ್ತರ ಪ್ರದೇಶದ ಪಖವಾಜ್, ಕರ್ನಾಟಕದ ವೀಣೆಯಿಂದ ಹಿಡಿದು ತಮಿಳುನಾಡಿನ ಮೃದಂಗದವರೆಗೆ.. ಹೀಗೆ ದೇಶದ ವಿವಿಧ ಭಾಗಗಳ ಶಾಸ್ತ್ರೀಯ ಸಂಗೀತದ ವಾದ್ಯಗಳನ್ನು ರಾಮ ಪ್ರತಿಷ್ಠಾಪನೆ ದಿನದಂದು ನುಡಿಸಲಾಗುವುದು ಎಂದು ಮಂದಿರದ ಟ್ರಸ್ಟಿಗಳು ತಿಳಿಸಿದ್ದಾರೆ.
ಜ.22ರಂದು ನಡೆಯುವ ವೈಭವದ ಸಮಾರಂಭದಲ್ಲಿ ಪ್ರದರ್ಶನ ನೀಡಲು ದೇಶದ ವಿವಿಧ ಭಾಗಗಳಿಂದ ಸಂಗೀತಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಉತ್ತರ ಪ್ರದೇಶದದ ಢೋಲಕ್ ವಾದಕರು, ಕರ್ನಾಟಕದ ವೀಣೆ ನುಡಿಸುವವರು, ಮಹಾರಾಷ್ಟ್ರದ ಸುಂದರಿ ವಾದಕರು, ಪಂಜಾಬ್‌ನಿಂದ ಅಲ್‌ಘೋಜಾ ವಾದಕರು, ಒಡಿಶಾದಿಂದ ಮದ್ದಳೆ ಬಾರಿಸುವವರು, ಮಧ್ಯಪ್ರದೇಶದ ಸಂತೂರ್ ವಾದಕರು, ಮಣಿಪುರದಿಂದ ಪಂಗ್ ನುಡಿಸುವವರು, ಅಸ್ಸಾಂನಿಂದ ನಗಡ ಹಾಗೂ ಕಲಿ ವಾದಕರು, ಛತ್ತೀಸಗಢದಿಂದ ತಂಬೂರಿ ಮೀಟುವವರು, ಬಿಹಾರದ ಪಖವಾಜ್ ನುಡಿಸುವವರು, ದೆಹಲಿಯಿಂದ ಶಹನಾಯಿ ವಾದಕರು, ರಾಜಸ್ಥಾನದ ರಾವನಹತ ನುಡಿಸುವವರು, ಪಶ್ಚಿಮ ಬಂಗಾಳದ ಶ್ರಿಖೋಲ್ ಹಾಗೂ ಸರೋದ್ ವಾದಕರು, ಆಂಧ್ರಪ್ರದೇಶದ ಘಟಂ ನುಡಿಸುವವರು, ಜಾರ್ಖಂಡ್‌ನ ಸಿತಾರ್ ವಾದಕರು, ತಮಿಳುನಾಡಿನ ನಾದಸ್ವರಂ ಹಾಗೂ ಮೃದಂಗ ಬಾರಿಸುವವರು ಮತ್ತು ಉತ್ತರಾಖಂಡದ ಹುಡ್ಕಾ ವಾದಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಾವುದೇ ವೈದಿಕ ವಿಧಿವಿಧಾನಗಳು ನಡೆಯದೇ ಇರುವ ವೇಳೆ ಹಾಗೂ ಅತಿಥಿಗಳು ಭಾಷಣ ಮಾಡದೇ ಇರುವ ವೇಳೆ ಇವರು ಸಂಗೀತ ನುಡಿಸಲಿದ್ದಾರೆ ಎಂದು ಹೇಳಿದ್ದಾರೆ.
ಮಧ್ಯಾಹ್ನ 12.20ಕ್ಕೆ ಪ್ರಾಣ ಪ್ರತಿಷ್ಠಾಪನೆ ಆರಂಭವಾಗಲಿದ್ದು, 1 ಗಂಟೆ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ದೇಗುಲ ಟ್ರಸ್ಟ್‌ನ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಅವರ ಸಮ್ಮುಖದಲ್ಲಿ ಸಮಾರಂಭವು ನಡೆಯಲಿದೆ. ಸುಮಾರು 8 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಆಯ್ಕೆಯಾದ ಸಂಗೀತಗಾರರು ತಮ್ಮ ಪ್ರದೇಶದ ಭಾರತೀಯ ಸಂಪ್ರದಾಯದ ವಿವಿಧ ರೀತಿಯ ವಾದ್ಯಗಳನ್ನು ನುಡಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.