ಶ್ರೀನಗರ: ವಿಧಿ 370ರ ರದ್ದತಿ ನಂತರ ಮೊದಲ ಬಾರಿ ಕಾಶ್ಮೀರದ ಪ್ರವಾಸಕ್ಕೆ ಗುರುವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಶ್ರೀನಗರದಿಂದ ತುಸು ದೂರದಲ್ಲಿರುವ ಶಂಕರಾಚಾರ್ಯರ ಬೆಟ್ಟಕ್ಕೆ ದೂರದಿಂದಲೇ ನಮಿಸಿದರು.

ಈ ಕುರಿತು ಟ್ವಿಟ್ ಮಾಡಿರುವ ಅವರು, ‘ಕಾಶ್ಮೀರದ ಭೇಟಿಯ ವೇಳೆ ಶ್ರೀನಗರದಲ್ಲಿರುವ ಶಂಕರಾಚಾರ ಬೆಟ್ಟದ ಸೌಂದರ್ಯವನ್ನು ದೂರದಿಂದಲೇ ಸವಿಯುವ ಅವಕಾಶ ಲಭಿಸಿದೆ. ಅದಕ್ಕೆ ಶಿರಬಾಗಿ ವಂದಿಸಿದ್ದೇನೆ’ ಎಂದು ಚಿತ್ರಗಳನ್ನೂ ಟ್ಯಾಗ್ ಮಾಡಿದ್ದಾರೆ.

ಕಾಶ್ಮೀರದ ಶ್ರೀನಗರದ ಬಳಿಯಿರುವ ಶಂಕರಾಚಾರ್ಯ ಬೆಟ್ಟಕ್ಕೆ ಅದೈತ ಸಿದ್ಧಾಂತದ ಪ್ರತಿಪಾದಕ ಮತ್ತು ಬೋಧಕರಾಗಿದ್ದ ಆದಿ ಶಂಕರರು ಭೇಟಿ ನೀಡಿರುವ ಐತಿಹ್ಯವಿದೆ. ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಮತ್ತು ಬೆಟ್ಟದ ಶಿಖರದಲ್ಲಿರುವ ದೇಗುಲಕ್ಕೆ ಶಂಕರರ ಹೆಸರು ಬಂದಿತೆಂದು ನಂಬಲಾಗಿದೆ. ಇಲ್ಲಿಗೆ ಹಿಂದೂಗಳು ಅಮರನಾಥ ಯಾತ್ರೆಯ ವೇಳೆ ಭೇಟಿ ನೀಡುತ್ತಾರೆ. ಈ ಸಮಯದಲ್ಲಿ ಶಿವಲಿಂಗವನ್ನು ಬೆಟ್ಟದ ಮೇಲಿರುವ ಆದಿ ಶಂಕರ ದೇಗುಲಕ್ಕೆ ಕೊಂಡೊಯ್ಯಲಾಗುತ್ತದೆ. ಇಂತಹ ಪವಿತ್ರ ಬೆಟ್ಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಮಿಸಿದರು.