ಬೆಳಗಾವಿ :
ಸುವರ್ಣ ವಿಧಾನ ಸೌಧದಲ್ಲಿ ವಿಧಾನ ಮಂಡಲದ ಚಳಿಗಾಲ ಅಧಿವೇಶನವನ್ನು ನಡೆಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಇದೇ ಕಾಲಕ್ಕೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಡಿ.4 ರಂದು ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಗಾರ್ಡನ್, ಸಂಯುಕ್ತ ಮಹಾರಾಷ್ಟ್ರ ಚೌಕ್, ಖಡೇಬಜಾರ, ಧರ್ಮವೀರ ಸಂಭಾಜಿ ಉದ್ಯಾನ, ಧರ್ಮವೀರ ಸಂಭಾಜಿ ಚೌಕ್, ಶ್ರೀ ಬಸವೇಶ್ವರ ಸರ್ಕಲ್ ಗಳಲ್ಲಿಯ ಯಾವುದಾದರೂ ಒಂದು ಸ್ಥಳದಲ್ಲಿ ಮರಾಠಾ ಮಹಾಮೇಳಾವವನ್ನು ಆಯೋಜಿಸುತ್ತಿರುವ ಬಗ್ಗೆ ತಿಳಿಸಿದ್ದು, ಬೆಳಗಾವಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮಹಾರಾಷ್ಟ್ರ ಏಕೀಕರಣ ಸಮಿತಿಯವರಿಗೆ ಮಹಾಮೇಳಾವ ಆಯೋಜಿಸಲು ಅನುಮತಿ ನಿರಾಕರಿಸಲಾಗಿದೆ.

ಮಹಾಮೇಳಾವದ ಆಯೋಜನೆಗೆ ಅನುಮತಿಯನ್ನು ನಿರಾಕರಿಸಿದ ಹೊರತಾಗಿಯೂ ಸಹ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ವಿಧಾನ ಮಂಡಲ ಅಧಿವೇಶನದ ಅವಧಿಯಲ್ಲಿ ಬೆಳಗಾವಿ ನಗರದಲ್ಲಿ ಮರಾಠಾ ಭಾಷಿಕ ಜನರನ್ನು ಒಗ್ಗೂಡಿಸಿ ಮೇಳಾವ ಮಾಡುವ ಸಾಧ್ಯತೆಗಳು ಇರುವ ಬಗ್ಗೆ ತಿಳಿದುಬಂದಿರುವುದರಿಂದ ವಿಧಾನ ಮಂಡಲದ ಅಧಿವೇಶನದ ಕಾಲಕ್ಕೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಾಕ್ಸಿನ್ ಡಿಪೋ, ಲೇಲೆ ಮೈದಾನ, ಕ್ಯಾಂಪ್ ಪೊಲೀಸ್ ವಾಪ್ತಿಯ ಧರ್ಮವೀರ ಸಂಬಾಜಿ ಮೂರ್ತಿ (ಬೋಗಾರವೇಸ್), ಮಾರ್ಕೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಂಭಾಜಿ ಉದ್ಯಾನವನ ಹಾಗೂ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಜಿ ಉದ್ಯಾನವನದ ಪ್ರದೇಶಗಲ್ಲಿ ದಿನಾಂಕ: 04/12/2023 ರಂದು ಬೆಳಗ್ಗೆ 6 ಗಂಟೆಯಿಂದ 05/12/2023 ರವರೆಗೆ ಸಿಆರ್‌ಪಿಸಿ 144 ರಡಿ ನಿಷೇಧಾಜ್ಞೆ ಆದೇಶವನ್ನು ಹೊರಡಿಸಲಾಗಿದೆ.

ಬೆಳಗಾವಿ ಸುವರ್ಣಸೌಧದದಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದ ಕಾಲಕ್ಕೆ ಬೆಳಗಾವಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕ ಶಾಂತತೆ ಕಾಪಾಡುವ ಹಿತದೃಷ್ಟಿಯಿಂದ ಬೆಳಗಾವಿ ನಗರದ ಟಿಳಕವಾಡಿ, ಶಹಾಪುರ, ಕ್ಯಾಂಪ್ ಹಾಗೂ ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯ ಪ್ರದೇಶಗಳಲ್ಲಿ ದಿನಾಂಕ: 04/12/2023 ರಂದು ಬೆಳಗ್ಗೆ 6ಗಂಟೆಯಿಂದ ದಿನಾಂಕ: 05/12/2023 ರಂದು ಬೆಳಗ್ಗೆ6 ಗಂಟೆಯ ವರೆಗೆ ಸಿಆರ್‌ಪಿಸಿ 144 ರಡಿ ನಿಷೇಧಾಜ್ಞೆ ಆದೇಶವನ್ನು ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದಾರೆ.

 

ನಿಷೇಧಾಜ್ಞೆಯ ಕಾಲಕ್ಕೆ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ.
ಮಹಾಮೇಳಾವ ಆಯೋಜನೆಗೆ ಅನುಮತಿಯನ್ನು ನಿರಾಕರಿಸಲಾಗಿದ್ದು, ಮಹಾಮೇಳಾವ ಆಯೋಜನೆಯನ್ನು ಹೊರತುಪಡಿಸಿ ಪೂರ್ವಾನುಮತಿ ಪಡೆದಿರುವ ಬೇರೆ ಸಂಘಟನೆ/ ಸಾರ್ವಜನಿಕರು ಆಯೋಜಿಸುವ ಶಾಂತಿಯುತ ಅನ್ವಯಿಸುವುದಿಲ್ಲ.

ನಿಷೇಧಾಜ್ಞೆಯ ಕಾಲಕ್ಕೆ ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ಪ್ರತಿಬಂಧಿಸಲಾಗಿದೆ.

ಶಸ್ತ್ರ, ಬಡಿಗೆ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.

ಕಲ್ಲುಗಳನ್ನು, ಕ್ತಾರಪದಾರ್ಥ, ಪಟಾಕಿ ಇಲ್ಲವೆ ಸ್ಫೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.

ಕಲ್ಲುಗಳನ್ನು ಮತ್ತು ಎಸೆಯುವ ವಸ್ತುಗಳನ್ನು ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ಪ್ರತಿಬಂಧಿಸಲಾಗಿದೆ.
ಯಾವುದೇ ವ್ಯಕ್ತಿ ಸಾರ್ವಜನಿಕರಾಗಲಿ ಈ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂತಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಂಡು ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಲಾಗುವುದು.

ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸುವುದು.
ಅವಶ್ಯಕ ಸೇವೆಗಳಾದ ರೋಗಿಗಳನ್ನು ಸಾಗಿಸುವ ಅಂಬುಲೆನ್ಸ್ ಹಾಗೂ ಇತರೆ ಅವಶ್ಯಕ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ತಡೆದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು
ಎಂದು ಆಯುಕ್ತರು ತಿಳಿಸಿದ್ದಾರೆ.