ಸುವರ್ಣಸೌಧ ಬೆಳಗಾವಿ : ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚಿನ ಸ್ಮಾರಕಗಳ ರಕ್ಷಣೆಗೆ ಸರ್ಕಾರ ಕ್ರಮ ವಹಿಸಿದೆ. ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಯೋಜನೆ ರೂಪಿಸುವುದಾಗಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಮಂಗಳವಾರದ ವಿಧಾನ ಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಸ್ಮಾರಕಗಳ ದತ್ತು ತೆಗೆದುಕೊಳ್ಳವ ಯೋಜನೆ ಜಾರಿಯಲ್ಲಿದೆ. ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲಾಗುವುದು. ಕರ್ನಾಟಕ ಪ್ರವಾಸೋದ್ಯಮ ನೀತಿ 2020-26 ಅಡಿ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಸಾಹಸ, ಕೃಷಿ, ಮನರಂಜನಾ, ಕ್ಯಾರವಾನ್, ಸಾಂಸ್ಕೃತಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಗ್ರಾಮ, ಪರಿಸರ, ಪಾರಂಪರಿಕ, ಹೋಂ ಸ್ಟೇ, ಹೋಟೆಲ್, ಹೌಸ್ ಬೋಟ್, ವಸ್ತು ಸಂಗ್ರಹಾಲಯ, ಗ್ಯಾಲರಿ, ರೋಪ್ ವೇ, ಧ್ವನಿ ಮತ್ತು ಬೆಳಕು, ಥೀಪ್ ಪಾರ್ಕ್ ಸೇರಿದಂತೆ 26 ರೀತಿಯ ಪ್ರವಾಸಿ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಲು ಮುಂದೆ ಬರುವ ಖಾಸಗೀ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಸಹಾಯಧನ ಪ್ರೋತ್ಸಾಹಕಗಳು ಮತ್ತು ರಿಯಾಯಿತಿಗಳನ್ನು ನೀಡಲಾಗಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, 2012-13 ರಲ್ಲಿ ಮೂಡುಬಿದರೆ ಕ್ಷೇತ್ರದ ಸಸಿಹಿತ್ಲು ಕಡಲ ತೀರದಲ್ಲಿ ಅಂತರಾಷ್ಟಿçÃಯ ಸರ್ಫಿಂಗ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಸರ್ಫಿಂಗ್ ನಂತಹ ಸಾಹಸ ಕ್ರೀಡೆಯ ಉತ್ತೇಜನಕ್ಕೆ ಸರ್ಕಾರ ಮುಂದಾಗಬೇಕು. ಸಸಿಹಿತ್ಲು ಪ್ರದೇಶದಲ್ಲಿನ ಕುಡಿಯುವ ನೀರು ಹಾಗೂ ಬೀದಿ ದೀಪ ಅಳವಡಿಸುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಿದರು.
ಜೈನ ಕಾಶಿ ಮೂಡಬಿದರೆಯ ಯಾತ್ರಿ ನಿವಾಸಕ್ಕೆ 15 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ರೂ.70 ಲಕ್ಷ ಮಂಜೂರಾಗಿದ್ದು, ಸರ್ಕಾರದಿಂದ ರೂ.52.50 ಲಕ್ಷ ಬಿಡುಗಡೆ ಮಾಡಲಾಗಿದೆ. ಕಾಮಗಾರಿಯ ಪೂರ್ಣಗೊಂಡಿದೆ. ಸಸಿಹಿತ್ಲು ಅಭಿವೃದ್ದಿ ಕಾಮಗಾರಿಗೆ ರೂ.25 ಲಕ್ಷ ಮೀಸಲಿರಿಸಿದ್ದು, ಆದ್ಯತೆಯ ಮೇರಗೆ ಶೀಘ್ರವೇ ಕೈಗೆತ್ತಿಕೊಂಡು ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಹೆಚ್.ಕೆ.ಪಾಟೀಲ್ ಉತ್ತರಿಸಿದರು.
ಮೂಡಬಿದರೆ ಕ್ಷೇತ್ರದ ಕಡಲ ಕೆರೆ ನಿಸರ್ಗಧಾಮ ಮತ್ತು ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮಕ್ಕೆ ರೂ. 1 ಕೋಟಿ, ಶಿರ್ತಾಡಿ ಗ್ರಾಮದ ಪ್ರವಾಸಿ ತಾಣ ಕೊಣಜಿಕಲ್ಲು ಗುಡ್ಡವನ್ನು ಅಭಿವೃದ್ಧಿ ರೂ.50 ಲಕ್ಷ ಹಾಗೂ ಮೂಡಬಿದರೆಯ ಸಾವಿರ ಕಂಬದ ಬಸದಿ ಹಾಗೂ ಇತರೆ ಜೈನ ಮಂದಿರಗಳ ಅಭಿವೃದ್ದಿಗೆ ರೂ.50 ಲಕ್ಷ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಕಲೇಶಪುರ ತಾಲ್ಲೂಕಿನ ಮರಗುಂದ, ಮಂಜರಾಬಾದ್ ಕೋಟೆ, ಮೂಕನಮನೆ ಜಲಪಾತ, ಅಬ್ಬಿ ಜಲಪಾತ, ಬಿಸಿಲೆ ಘಾಟ್, ಪಾಂಡವರ ಬೆಟ್ಟ, ಮೂರ್ಕಣ್ ಬೆಟ್ಟ, ಜೇನುಕಲ್ಲು ಬೆಟ್ಟ, ಗುಡ್ಡ ಬಸವಣ್ಣ, ಪಾಟ್ಲೆಬೆಟ್ಟ ಪ್ರದೇಶಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಗುರುತಿಸಲಾಗಿದೆ ಎಂದು ತಿಳಿಸಿದರು.
ಕೇಬಲ್ ಕಾರ್ ಪ್ರಾರಂಭಕ್ಕೆ ಯೋಜನೆ
ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಹೆಚ್.ಕೆ.ಪಾಟೀಲ್ ಯಲ್ಲಮ್ಮನಗುಡ್ಡ, ಮಧುಗಿರಿ, ಅಂಜನಾದ್ರಿ, ನಂದಿಬೆಟ್ಟ ಹಾಗೂ ಗಗನ ಚುಕ್ಕಿಯಲ್ಲಿ ಕೇಬಲ್ ಕಾರ್ ಪ್ರಾರಂಭಿಸುವುದಕ್ಕೆ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಸ್ಪಷ್ಟ ಪಡಿಸಿದರು.
2023-24ನೇ ಸಾಲಿನ ಆಯವ್ಯಯದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸರ್ಕಾರದಿಂದ ರೂ.339.54 ಕೋಟಿ ಮೀಸಲಿರಿಸಲಾಗಿದೆ. ಈ ಪೈಕಿ ರೂ.90 ಕೋಟಿಯನ್ನು ಬಂಡವಾಳ ವೆಚ್ಚಗಳ ಲೆಕ್ಕಶೀರ್ಷಿಕೆಗಳಡಿ ಈಗಾಗಲೇ ಒದಗಿಸಲಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಜಲ ಸಾಹಸ ಕ್ರೀಡಗಳನ್ನು ಕಲಿಯಲು ರಾಜ್ಯದಿಂದ ಹೊರ ರಾಷ್ಟçಗಳಿಗೆ ಅನೇಕರು ತೆರಳುತ್ತಾರೆ. ರಾಜ್ಯದಲ್ಲಿ ಸುಮಾರು 300 ಕಿ.ಮೀ ಉದ್ದದ ಕರವಾಳಿ ತೀರವಿದೆ. ಇಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜಲ ಸಾಹಸ ಕ್ರೀಡೆಗಳ ಪ್ರವಾಸೋದ್ಯಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಕೋರಿದರು.
ರಾಜ್ಯದ ಕರಾವಳಿ ಜಿಲ್ಲೆಗಳು ಕಡಲು ಕಿನಾರೆ, ಧಾರ್ಮಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನಾಡಿಗೆ ಹೆಸರಾಗಿವೆ. ಈ ಮೂರು ಅಂಶಗಳ ಮುಂದೆ ಇಟ್ಟುಕೊಂಡು, ಕರಾವಳಿ ಅಭಿವೃದ್ದಿ ಮಂಡಳಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆ ರೂಪಿಸುವಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಸರ್ಕಾರಕ್ಕೆ ಸೂಚನೆ ನೀಡಿದರು.