ಮಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಬಿಜೆಪಿ ಮತ್ತಷ್ಟು ಪ್ರಬಲವಾದ ಸನ್ನಿವೇಶ ಸೃಷ್ಟಿಯಾಗಿದೆ.
ಈ ಸಲ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಬ್ರಿಜೇಶ್ ಚೌಟ ಅವರಿಗೆ
ಟಿಕೆಟ್ ಘೋಷಣೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಭದ್ರಕೋಟೆ ಪುತ್ತೂರು ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಲೋಕಸಭೆ ಚುನಾವಣೆಯಲ್ಲೂ ಪಕ್ಷೇತರವಾಗಿ ಸ್ಪರ್ಧಿಸುವ ಘೋಷಣೆಯನ್ನು ಪುತ್ತಿಲ ಪರಿವಾರ ಘೋಷಿಸಿತ್ತು.
ಈ ಘೋಷಣೆ ಬಿಜೆಪಿ ನಾಯಕರಿಗೆ ತಲೆಬಿಸಿಯಾದರೆ, ಇತ್ತ, ಪುತ್ತಿಲ ಪರಿವಾರ-ಬಿಜೆಪಿ ನಡುವಿನ ತಿಕ್ಕಾಟವು ತಮಗೆ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಕನಸನ್ನು ಕಾಂಗ್ರೆಸ್ ನಾಯಕರು ಕಂಡಿದ್ದರು. ಆದರೆ, ನಿರಂತರ ಸಂಧಾನದ ನಂತರ ಪುತ್ತಿಲ ಅವರು ಬಿಜೆಪಿಗೆ ವಾಪಸ್ ಆಗಿದ್ದಾರೆ. ಇದರಿಂದಾಗಿ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಂತಾಗಿದ್ದು, ನಾಲ್ಕನೇ ಬಾರಿ ಕ್ಷೇತ್ರ ಗೆದ್ದುಕೊಳ್ಳುವ ಹುಮ್ಮಸ್ಸಿನಲ್ಲಿ ಕೇಸರಿ ನಾಯಕರಿದ್ದಾರೆ. ಆದರೆ, ಪ್ರಬಲ ನಾಯಕರ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್
ಈ ಬಾರಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಆಪ್ತ ಪದ್ಮರಾಜ್ ಅವರನ್ನು ಕಣಕ್ಕಿಳಿಸುವ ಮೂಲಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳುವ ಸನ್ನಾಹ ನಡೆಸಿದೆ. ಅವರು ಬಿಲ್ಲವ ಸಮುದಾಯಕ್ಕೆ ಸೇರಿದವರು. ಈ ಹಿನ್ನೆಲೆಯಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಕಾವೇರಿದೆ. ಒಟ್ಟಾರೆ ಗಮನಿಸಿದರೆ ಸದ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದ್ದ ಪುತ್ತಿಲ ಪರಿವಾರ ಮತ್ತೆ ಬಿಜೆಪಿ ಪಡೆಯನ್ನು ಸೇರಿಕೊಂಡಿರುವುದು ಬಿಜೆಪಿ ಪಾಲಿಗೆ ಬಹುದೊಡ್ಡ ಶಕ್ತಿಯನ್ನು ತಂದು ಕೊಟ್ಟಿರುವುದಂತೂ ನಿಜ.