ಮುಂಬಯಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆ ಮಾ.17ರಂದು ಮುಂಬಯಿಯ ಶಿವಾಜಿ ಪಾರ್ಕ್‌ನಲ್ಲಿ ಬೃಹತ್‌ ರಾಲಿಯೊಂದಿಗೆ ಸಮಾರೋಪಗೊಳ್ಳಲಿದೆ.

ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಯೋಜಿಸಿದೆ. ಯಾತ್ರೆ ಮಾ.12ರಂದು ನಂದು ಬ‌ರ್ ಬಾರ್‌ನಿಂದ ಮಹಾರಾಷ್ಟ್ರ ಪ್ರವೇಶಿಸಲಿದೆ. ಶರದ್ ಪವಾರ್‌ ನೇತೃತ್ವದ ಎನ್‌ಸಿಪಿ, ಉದ್ಧವ್ ಠಾಕ್ರೆ ಸಾರಥ್ಯದ ಶಿವಸೇನೆ ಹಾಗೂ ಮಹಾ ವಿಕಾಸ್ ಆಘಾಡಿಯ ಮುಖಂಡರು ಈ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ತಿಳಿಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ರಮೇಶ್ ಚೆನ್ನಿತ್ತಲ ಸಮ್ಮುಖದಲ್ಲಿ ಯಾತ್ರೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಗುರುವಾರ ಪರಿಶೀಲನಾ ಸಭೆ ನಡೆಸಿದರು. ಗುಜರಾತ್‌ನಲ್ಲಿ ಜೋಡೊ ನ್ಯಾಯ ಯಾತ್ರೆಯ ಎರಡನೇ ದಿನವಾದ ಶುಕ್ರವಾರ, ಝಲೋದ್ ಬಳಿಯ ಕಾಂಬೋಯಿ ಧಾಮ್‌ ಗೆ ಭೇಟಿ ನೀಡಿದ ರಾಹುಲ್, ಬುಡಕಟ್ಟು ಜನರ ನಾಯಕ ಗೋವಿಂದ್ ಗುರುಗೆ ಗೌರವ ನಮನ ಸಲ್ಲಿಸಿದರು. ಬಳಿಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಕಾರ್ಯಕರ್ತರು ನೀಡಿದ ಕೇಕ್ ನ್ನು ರಾಹುಲ್ ಗಾಂಧಿ ಕತ್ತರಿಸಿದರು.