ಕಾರವಾರ: ರೈಲ್ವೆ ಟ್ರ್ಯಾಕ್ ಮ್ಯಾನ್ ಮಹಾದೇವ ನಾಯ್ಕ ಅವರ ಸಮಯ ಪ್ರಜ್ಞೆಯಿಂದ ಸಂಭನೀಯ ರೈಲು ದುರಂತವೊಂದು ತಪ್ಪಿದೆ. ಟ್ರ್ಯಾಕ್ ಮ್ಯಾನ್ ಮಹಾದೇವ ಅವರ ಕಾರ್ಯಕ್ಕೆ ಕೊಂಕಣ ರೈಲ್ವೆ ವಲಯದ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಮಹಾದೇವ ಅವರ ಕಾರ್ಯವನ್ನು ಕೊಂಕಣ ರೈಲ್ವೆ ವಲಯ ಟ್ವೀಟ್ ಮಾಡಿ ಅಭಿನಂದಿಸಿದೆ.

ಕೊಂಕಣ ರೈಲ್ವೆಯ ಕುಮಟಾ-ಹೊನ್ನಾವರ ನಡುವೆ ಹಳಿಗಳ ಜೋಡಣೆಯ ವೆಲ್ಡಿಂಗ್ ಬಿಟ್ಟುಹೋಗಿತ್ತು. ಇದನ್ನು ಬುಧವಾರ ನಸುಕಿನ ಜಾವ 4:50ರ ಸಮಯದಲ್ಲಿ ಟ್ರ್ಯಾಕ್‌ ಮ್ಯಾನ್ ಮಹದೇವ ಅವರು ಗಮನಿಸಿದ್ದಾರೆ. ಅದೇ ವೇಳೆಗೆ ಆ ಮಾರ್ಗದಲ್ಲಿ ರೈಲು ಹಾದುಹೋಗಬೇಕಿತ್ತು. ಹೀಗಾಗಿ ಅವರು ತಕ್ಷಣವೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ತಿರುವನಂತಪುರ-ಡೆಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲನ್ನು ಅಲ್ಲಿಯೇ ತಡೆಹಿಡಿಯುವಂತೆ ಕೂಡಲೇ ಹೊನ್ನಾವರ ನಿಲ್ದಾಣಕ್ಕೆ ಕರೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಿ ರೈಲು ನಿಲ್ದಾಣದಿಂದ ಹೊರಟು ಕೆಲ ನಿಮಿಷಗಳಾಗಿತ್ತು.

ನಂತರ ಮಹಾದೇವ ನಾಯ್ಕ, ರಾಜಧಾನಿ ರೈಲಿನ ಲೋಕೊ ಪೈಲಟ್ ಗೆ ಕರೆ ಮಾಡಿದರು. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. ಈ ಎಕ್ಸ್‌ಪ್ರೆಸ್‌ ರೈಲು ಏಳೆಂಟು ನಿಮಿಷದ ಒಳಗಡೆ ಅದೇ ಸ್ಥಳದ ಮೂಲಕ ಹಾದುಹೋಗಲಿತ್ತು. ತಡ ಮಾಡಿದರೆ ಅಪಾಯವಾಗುವ ಸಾಧ್ಯತೆ ಅರಿತ ಮಹಾದೇವ ಅವರು ಹಳಿ ಮೇಲೆ ಓಡಿ ಐದು ನಿಮಿಷದಲ್ಲಿ ಅರ್ಧ ಕಿ.ಮೀ. ಕ್ರಮಿಸಿ ದೂರದಲ್ಲಿ ಬರುತ್ತಿದ್ದ ರೈಲಿಗೆ ನಿಲ್ಲಿಸುವಂತೆ ಸೂಚನೆ ನೀಡಿದರು. ಸೂಚನೆ ಅರಿತ ಲೋಕೊ ಪೈಲಟ್‌ ರೈಲು ನಿಲ್ಲಿಸಿದ್ದಾರೆ. ಇದರಿಂದ ಸಂಭಾವ್ಯ ಅಪಾಯ ತಪ್ಪಿತು. ಸಿಬ್ಬಂದಿ ಹಳಿ ಜೋಡಣೆ ಬಿಟ್ಟಿದ್ದ ಸ್ಥಳದಲ್ಲಿ ವೆಲ್ಡಿಂಗ್ ಮಾಡಿದ ನಂತರ ರೈಲು ಪ್ರಯಾಣ ಬೆಳೆಸಿತು.

ಮಹಾದೇವ ಅವರ ಸಮಯಪ್ರಜ್ಞೆಗೆ ರೈಲ್ವೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಂಕಣ ರೈಲ್ವೆ ಸಿಎಂಡಿ ಸಂತೋಷ ಕುಮಾರ ಝಾ ಅವರು ಮಹಾದೇವ ನಾಯ್ಕ ಅವರಿಗೆ 15 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಕೊಂಕಣ ರೈಲ್ವೆ ಸೀನಿಯರ್ ಎಂಜಿನಿಯರ್ ಬಿ.ಎಸ್.ನಾಡಗೆ ಮುರುಡೇಶ್ವರ ಸಮೀಪ ರೈಲ್ವೆ ಹಳಿ ಮೇಲೆಯೇ ಮಹಾದೇವ ನಾಯ್ಕ ಅವರನ್ನು ಸನ್ಮಾನಿಸಿ ಬಹುಮಾನ ನೀಡಿದರು