ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ಮಳೆ ಹಾಗೂ ಗಾಳಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಮುಂದಿನ ಒಂದು ವಾರ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೋಮವಾರ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲಿ ಮಾತ್ರ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿಯ ಇತರ ಜಿಲ್ಲೆಗಳು ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ನಿರಂತರ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಉದ್ದಕ್ಕೂ ಬಿರುಗಾಳಿಯಿಂದ ಕೂಡಿದ ಹವಾಮಾನ ಇರಲಿದೆ ಗಂಟೆಗೆ 35 ರಿಂದ 55 ಕಿಮೀ ವೇಗದಲ್ಲಿ ಗಾಳಿ ಬೀಸಬಹುದು. ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ಅಬ್ಬರಿಸುತ್ತಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಕರಾವಳಿ ಭಾಗದಲ್ಲಿ ಒಂದೆರಡು ದಿನಗಳಿಂದ ಮಳೆಯ ಪ್ರಮಾಣ ಕ್ಷೀಣಿಸಿದೆ. ಮಂಗಳವಾರದಿಂದ ಮತ್ತಷ್ಟು ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.