ಬೆಳಗಾವಿ : ಬೆಳಗಾವಿಯ ಖ್ಯಾತ ಸಾಮಾಜಿಕ ಕಾರ್ಯಕರ್ತರಾಗಿದ್ದ ರಂಗನಾಥ ಪೋತದಾರ (85) ಮಂಗಳವಾರ ಪುಣೆಯ ತಮ್ಮ ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧುಗಳು ಇದ್ದಾರೆ. ಬೆಳಗಾವಿ ಅನಂತಶಯನಗಲ್ಲಿ ನಿವಾಸಿಯಾಗಿದ್ದ ಅವರು ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ನಂಬರ್ 31ರ ನಗರಸೇವಕರಾಗಿ ಸೇವೆ ಸಲ್ಲಿಸಿದ್ದರು. ಟಿಳಕ್ ಚೌಕ್ ಸಾರ್ವಜನಿಕ ಗಣೇಶೋತ್ಸವ ಮಂಡಳದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ 50 ವರ್ಷಗಳಿಗೂ ಹೆಚ್ಚು ಕಾಲ ದುಡಿದಿದ್ದರು. ಪೋತದಾರ ಮನೆತನದ ರಾಮದೇವ್ ಗಲ್ಲಿಯ ಬೆಳಗಾಂ ಮೆಡಿಕಲ್ಸ್ ನ ಕಾರ್ಯಭಾರ ನಿರ್ವಹಿಸಿದ್ದ ಅವರು ಮೆಡಿಕಲ್ಸ್ ಫೋರಮ್ ನಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬೆಳಗಾವಿಯ ವಿವಿಧ ಪತ್ರಿಕೆಗಳಲ್ಲಿ ರಾಜಕೀಯ, ಸಾಮಾಜಿಕ, ಕ್ರೀಡೆ ಸೇರಿದಂತೆ ಪ್ರಚಲಿತ ವಿಷಯಗಳ ಮೇಲೆ ಬೆಳಕು ಚೆಲ್ಲುವ ಅಂಕಣಗಳ ಮೂಲಕ ಅವರು ಚಿರಪರಿಚಿತರಾಗಿದ್ದರು. ಮಹಾರಾಷ್ಟ್ರ ಸರಕಾರದ ಅಂಕಿ ಅಂಶ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ಅವರು ಖ್ಯಾತ ಕ್ರಿಕೆಟ್ ಆಟಗಾರರಾಗಿ ಚಿರಪರಿಚಿತರಾಗಿದ್ದರು. ಅತ್ಯಂತ ಸರಳ ಸ್ವಭಾವದ ಅವರು ಸ್ನೇಹಜೀವಿಯಾಗಿ ಎಲ್ಲರ ಸ್ನೇಹ ಸಂಪಾದಿಸಿದ್ದರು.