ಬೆಳಗಾವಿ :
ಮಿತಿಮೀರಿ ಕಬ್ಬು ತುಂಬಿದ ಲಾರಿಗಳು ಹಾಗೂ ಟ್ರಾಕ್ಟರ್‌ಗಳು ಬೆಳಗಾವಿ ಮಹಾನಗರದ ಗಾಂಧಿ ನಗರ, ಆರ್,ಟಿ.ಓ. ವೃತ್ತ, ಚೆನ್ನಮ್ಮ ವೃತ್ತ, ಕ್ಲಬ್ ರಸ್ತೆ ಮೂಲಕ ಹಿಂಡಲಗಾ ಕಡೆಗೆ ಸಾಗುತ್ತಿದ್ದು ಇವು ಸಾರ್ವಜನಿಕರಿಗೆ, ವಿಶೇಷವಾಗಿ ಬೈಕ್ ಸವಾರರಿಗೆ, ಮಕ್ಕಳಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ.

ಇತ್ತೀಚಿಗೆ ಹಿಂಡಲಗಾ ಗಣಪತಿ ದೇವಸ್ಥಾನದ ಬಳಿ ಕಬ್ಬು ತುಂಬಿದ ಲಾರಿಯೊಂದು ಉರುಳಿ ಬಿದ್ದ ಪರಿಣಾಮವಾಗಿ ಬೈಕ್ ಸವಾರರಿಬ್ಬರು ಗಾಯಗೊಂಡು ಪಾರಾಗಿದ್ದಾರೆ. ಗಾಂಧಿ ಪ್ರತಿಮೆಯಿಂದ ಹಿಂಡಲಗಾ ಗಣಪತಿ ದೇವಸ್ಥಾನದ ರಸ್ತೆ ವಾಹನಗಳ ಪ್ರಯಾಣಕ್ಕೆ ಸುರಕ್ಷಿತವಾಗಿಲ್ಲ. ಈ ರಸ್ತೆಯ ಅಗಲೀಕರಣ ತಾಂತ್ರಿಕ ಅಡಚಣೆಗಳಿಂದಾಗಿ ನೆನೆಗುದಿಗೆ ಬಿದ್ದಿದೆ.

ಇಂತಹ ರಸ್ತೆಯಲ್ಲಿ ಕಬ್ಬು ತುಂಬಿದ ಲಾರಿಗಳು ಸಾಗುವಾಗ ಅದರ ಎಡ ಬದಿಗೆ ಹೋಗುವ ಜನರಿಗೆ ಅಪಾಯವೂ ತಲೆಯ ಮೇಲೆ ಯಾವಗಲೂ ತೂಗುತ್ತಿದೆ. ಆದ್ದರಿಂದ ಕಬ್ಬು ತುಂಬಿದ ಲಾರಿಗಳನ್ನು ನಗರದ ಮಧ್ಯೆ ಸಂಚರಿಸುವುದನ್ನು ತಡೆಯುವದು ಅವಶ್ಯಕವಾಗಿದೆ. ಇಂತಹ ಲಾರಿಗಳು ಬಾಕ್ಸೆಟ್ ರಸ್ತೆಯ ಮೂಲಕವೇ ಮಹಾರಾಷ್ಟ್ರಕ್ಕೆ ಹೋಗುವಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಕೊಳ್ಳುವಂತೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮನವಿ ಮಾಡಿದ್ದಾರೆ.