ಕುಂದಾಪುರ ತಾಲೂಕಿನ ಸುಪ್ರಸಿದ್ದ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಬಹುನಿರೀಕ್ಷಿತ ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಸ್ಕ್ರಿಪ್ಟ್ ಪೂಜೆ ಮತ್ತು ಮುಹೂರ್ತ ಮಾಡಲಾಗಿದೆ. ಇಡೀ ದೇವಸ್ಥಾನವನ್ನು ಪುಷ್ಪಾಂಲಕಾರದಿಂದ ಶೃಂಗರಿಸಲಾಗಿತ್ತು.
ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಭಾಗಿಯಾಗಿದ್ದರು. ಈ ದೇವಸ್ಥಾನದ ಬಗ್ಗೆ ಅವರಿಗೆ ಅಪಾರ ನಂಬಿಕೆ ಇದೆ.
ರಿಷಬ್ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರಿಗೆ ಖ್ಯಾತಿ ಹೆಚ್ಚಾಗಿದೆ. ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರ ಅಭಿಮಾನಿ ಬಳಗ ಹೆಚ್ಚಾಯಿತು. ಪರಭಾಷೆಗಳಿಂದಲೂ ಅವರಿಗೆ ಆಫರ್ ಬರಲು ಆರಂಭವಾಯಿತು. ಸಿನಿಮಾ ಮಾತ್ರವಲ್ಲದೇ ಅವರ ವೈಯಕ್ತಿಕ ಜೀವನದಲ್ಲೂ ಒಳ್ಳೆಯದೇ ಆಗಿದೆ. ಈ ಎಲ್ಲ ಅಭಿವೃದ್ಧಿಗೆ ಅವರ ಪರಿಶ್ರಮದ ಜೊತೆಗೆ ದೇವರ ಆಶೀರ್ವಾದವೂ ಇದೆ. ಆ ವೇಳೆ ಅವರು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬಗ್ಗೆ ತಮಗೆ ಇರುವ ನಂಬಿಕೆ ಏನು ಎಂಬುದನ್ನು ತಿಳಿಸಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಎಂದರೆ ಒಂದು ವಿಶೇಷವಾದ ನಂಬಿಕೆ ಇದೆ. ನಮ್ಮ ಜೀವನದಲ್ಲಿ ಏನೇ ಒಳ್ಳೆಯದು ಆಗಿದ್ದರೂ ಅದನ್ನು ಇಲ್ಲಿಂದಲೇ ಶುರು ಮಾಡಿರುವುದು.
ರಿಷಬ್ ಶೆಟ್ಟಿ ಅವರು ನನ್ನನ್ನು ಮೊದಲ ಬಾರಿ ಇಲ್ಲಿಯೇ ನೋಡಿದ್ದು. ಆನಂತರ ‘ಕಾಂತಾರ’ ಸಿನಿಮಾದ ಮುಹೂರ್ತ ಇಲ್ಲಿಯೇ ಮಾಡಿದ್ದೆವು. ಈ ದೇವರ ದಯೆಯಿಂದ ಆ ಸಿನಿಮಾ ತುಂಬ ಚೆನ್ನಾಗಿ ಆಯಿತು ಎಂಬುದು ನಿಮಗೆಲ್ಲರಿಗೂ ಗೊತ್ತು. ಅದೇ ನಂಬಿಕೆಯಿಂದ ಇಂದು ಪೂಜೆ ಮಾಡಿಸಿ, ‘ಕಾಂತಾರ: ಚಾಪ್ಟರ್ 1′ ಸಿನಿಮಾದ ಮುಹೂರ್ತ ಮಾಡಿದ್ದೇವೆ’ ಎಂದು ಪ್ರಗತಿ ಶೆಟ್ಟಿ ಹೇಳಿದ್ದಾರೆ.
ದೈವ, ದೇವರು ಮತ್ತು ಜನರ ಆಶೀರ್ವಾದದಿಂದ ಈ ಬಾರಿ ಕೂಡ ಯಾವುದೇ ವಿಘ್ನಗಳು ಇಲ್ಲದೇ ಸಿನಿಮಾ ತುಂಬ ಚೆನ್ನಾಗಿ ಆಗಲಿ ಎಂದು ಕೇಳಿಕೊಳ್ಳುತ್ತೇನೆ. ‘ಕಾಂತಾರ: ಚಾಪ್ಟರ್ 1′ ವಿಚಾರದಲ್ಲಿ ಒತ್ತಡ ಏನೂ ಇಲ್ಲ. ಜನರ ಕೊಟ್ಟಿರುವ ಪ್ರೀತಿ ಮತ್ತು ನಂಬಿಕೆಯನ್ನು ನಾವು ಉಳಿಸಿಕೊಂಡು ಹೋಗಬೇಕು’ ಎಂದಿದ್ದಾರೆ ಪ್ರಗತಿ ಶೆಟ್ಟಿ.