- ಸಮಾಜ ಇಂದು ಹಲವು ಬಗೆಯ ಅಶಾಂತಿ, ಅತೃಪ್ತಿ, ಅಸಹನೆ, ಉದ್ವೇಗಗಳಿಂದ ತೊಳಲಾಡುತ್ತಿದೆ. ಇದಕ್ಕೆ ಪರಿಹಾರವೇನು? ಪರಿಹಾರವೆಲ್ಲಿದೆ? ಪರಿಹಾರ ಕೊಡುವವರು ಯಾರು? ಈ ಪ್ರಶ್ನೆ ಜನರನ್ನಿಂದು ಕಾಡುತ್ತಿದೆ.
ತಮ್ಮ ಜೀವನ ವಿದ್ಯಾ ಮಿಶನ್ ಮೂಲಕ ಜನರಲ್ಲಿ ಅಂತಹ ಅರಿವನ್ನು ಉಂಟು ಮಾಡಲು ಬದುಕಿನುದ್ದಕ್ಕೂ ಶ್ರಮಿಸಿದವರು ತತ್ವಜ್ಞಾನಿ, ಸಮಾಜ ಸೇವಕ, ಮಹಾಪ್ರವಚನಕಾರ ಸದ್ಗುರು ವಾಮನರಾವ್ ಪೈ ಅವರು. ಅವರ ಜನ್ಮಶತಾಬ್ದಿಯ ವರ್ಷ ಇದು. ಗುರುಪೂರ್ಣಿಮೆಯ ದಿನವಾದ ಇಂದು ಅವರನ್ನು ಸ್ಮರಿಸುವುದಗತ್ಯ.
ಮುಂಬಯಿಯಲ್ಲಿ ೧೯೨೩ ರ ಅಕ್ಟೋಬರ್ ೨೧ ರಂದು ಜನಿಸಿದ ವಾಮನರಾವ್ ಪೈ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ಇಕನಾಮಿಕ್ಸ್ ವಿಷಯದಲ್ಲಿ ಪದವಿ ಪಡೆದು , ಮಹಾರಾಷ್ಟ್ರ ಸರಕಾರದ ಸೇವೆಗೆ ಸೇರಿ ಫೈನಾನ್ಸ್ ಇಲಾಖೆ ಡೆ. ಸೆಕ್ರೆಟರಿಯಾಗಿ ೧೯೮೧ ರಲ್ಲಿ ನಿವೃತ್ತರಾದರು.
ಆದರೆ ಅವರು ತಮ್ಮ ೨೫ ನೆಯ ವಯಸ್ಸಿನಲ್ಲಿಯೇ ಶ್ರೀ ನಾನಾ ಮಹಾರಾಜ ಗೋಂದೆಕರ ಅವರ ಪ್ರಭಾವ ಪ್ರೇರಣೆಗೊಳಗಾಗಿ ಆಧ್ಯಾತ್ಮಿಕ ವಿಚಾರಗಳತ್ತ ಒಲವು ಬೆಳೆಸಿಕೊಂಡು ತಮ್ಮ ಸುತ್ತಲಿನ ಸಮಾಜಕ್ಕೆ ಅಂತಹ ವಿಚಾರಗಳನ್ನು ತಲುಪಿಸುವ ಕಾರ್ಯ ಆರಂಭಿಸಿದರು. ಅದೊಂದು ಬಗೆಯ ವೈಚಾರಿಕ , ಬೌದ್ಧಿಕ ಆಂದೋಲನವನ್ನೇ ಹಮ್ಮಿಕೊಂಡು ಜೀವನ ವಿದ್ಯಾ ಮಿಶನ್ ಸಂಸ್ಥೆಯ ಮೂಲಕ , ಪ್ರವಚನಗಳ ಮೂಲಕ ಜನರಲ್ಲಿ ಸ್ವಯಂ ಜಾಗೃತಿಯನ್ನುಂಟುಮಾಡಲು ಶ್ರಮಿಸಿದರು.
ಸದ್ಗುರು ವಾಮನರಾವ್ ಪೈ ಅವರ ಬೋಧನೆಯ ಮುಖ್ಯ ಅಂಶ ” ನಿಮ್ಮ ಜೀವನದ ಶಿಲ್ಪಿ ನೀವೇ” ಎಂಬುದಾಗಿತ್ತು. ಅಂದರೆ ಮನುಷ್ಯ ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳಬೇಕು ಮತ್ತು ಮೊದಲು ತಾನು ಒಳ್ಳೆಯವನಾಗಿ ತನ್ನ ಸುತ್ತಲಿನ ಜನರನ್ನು ಸನ್ಮಾರ್ಗಕ್ಕೆ ತರಬೇಕು. ಅವರು ತಮ್ಮ ಜೀವನಾವಧಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪ್ರವಚನಗಳನ್ನು ನೀಡಿದರಲ್ಲದೆ ೨೭ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಭಾರತದಾದ್ಯಂತ ಮತ್ತು ಅಮೆರಿಕೆ ಮತ್ತಿತರ ಕಡೆ ಅವರು ಪ್ರವಚನ ನೀಡಿದ್ದಾರೆ. ಮಾನಸಿಕವಾಗಿ ನೊಂದ ಜನರಲ್ಲಿ ಜೀವನದ ಆಸೆ ಮರಳಿಸಿದ್ದಾರೆ. ಬದುಕಿನ ನೋವು, ಆತಂಕ, ಉದ್ವೇಗಗಳಿಗೆ ಪರಿಹಾರ ನಮ್ಮಲ್ಲಿಯೇ ಇದೆ ಎನ್ನುವುದನ್ನು ಮನಗಾಣಿಸಿಕೊಟ್ಟಿದ್ದಾರೆ. ಇಂತಹ ಮಹಾಗುರುವಿಗೆ ಗುರುಪೂರ್ಣಿಮೆಯ ದಿನದ ಗೌರವಪೂರ್ವಕ ವಂದನೆಗಳು.
– ಎಲ್. ಎಸ್. ಶಾಸ್ತ್ರಿ