ಕಮಲಶಿಲೆ : ಪುರಾಣ ಪ್ರಸಿದ್ಧ ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಳದ ಗೋ ಶಾಲೆಯಲ್ಲಿ ಶನಿವಾರ ತಡ ರಾತ್ರಿ ಗೋ ಕಳ್ಳತನಕ್ಕೆ ಯತ್ನಿಸಿರುವುದನ್ನು ಸೈನ್ ಇನ್ ಸಿಸಿಟಿವಿ ತಂಡ ಸಕಾಲದಲ್ಲಿ ಎಚ್ಚರಿಕೆಯ ಮಾಹಿತಿ ನೀಡಿ ಸಂಭಾವ್ಯ ಕಳ್ಳತನವನ್ನು ವಿಫಲಗೊಳಿಸಿದೆ.
ಕಮಲಶಿಲೆ ದೇವಳದ ಗೋ ಶಾಲೆಯಲ್ಲಿ ಶನಿವಾರ ತಡ
ರಾತ್ರಿ 2.46 ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಗೋ
ಶಾಲೆಯ ಎದುರಿನ ಬಾಗಿಲಿನ ಬೀಗ ಮುರಿದು ಬದಿಯ ಬಾಗಿಲ ಮೂಲಕ ಒಳಗಡೆ
ನುಗ್ಗಿ ಮೂರು ಹಸುಗಳಿಗೆ ಕಟ್ಟಿದ ಹಗ್ಗವನ್ನು ಕತ್ತಿಯಿಂದ ಕಡಿದು ಸಾಗಾಟಕ್ಕೆ ಯತ್ನಿಸಿದರು. ದೇವಳದ
ವತಿಯಿಂದ ಸೈನ್ ಇನ್ ಸೆಕ್ಯುರಿಟೀಸ್ ಸಂಸ್ಥೆಯ ಲೈವ್ ಮಾನಿಟರಿಂಗ್ ಸಿಸಿಟಿವಿ ಹಾಕಿಸಲಾಗಿದ್ದು, ಈ ಸಂಸ್ಥೆ 24 ತಾಸುಗಳ ನಿರಂತರ ಸಿಸಿಟಿವಿ
ಮೇಲೆ ನೇರ ನಿಗಾ ಇಟ್ಟು ಪೊಲೀಸ್ ಇಲಾಖೆಗೆ ಇಂತಹ
ಕಳ್ಳತನ,ಅನುಮಾನಸ್ಥ ವ್ಯಕ್ತಿಗಳ ಓಡಾಟ,ಸಂಶಯಾಸ್ಪದ
ಚಟುವಟಿಕೆಗಳ ಮಾಹಿತಿಗಳನ್ನು ತಕ್ಷಣ ನೀಡುವ ವ್ಯವಸ್ಥೆಯನ್ನು ಹೊಂದಿದೆ.
ಪೊಲೀಸ್ ಇಲಾಖೆಗೆ ಮಾಹಿತಿ:
ಕುಂದಾಪುರದ ಅಂಕದಕಟ್ಟೆಯಲ್ಲಿರುವ ಮಾನಿಟರಿಂಗ್ ಸೆಂಟರ್ ಸಿಬ್ಬಂದಿ ಕಮಲಶಿಲೆ ಗೋ ಶಾಲೆಯಲ್ಲಿ ಜಾನುವಾರುಗಳ ಹಗ್ಗ ಕಡಿಯತ್ತಿರುವುದನ್ನು ಕಂಡು ಕಮಲಶಿಲೆ ವ್ಯಾಪ್ತಿಯ
ಬೀಟ್ ಪೊಲೀಸ್,ಎಸ್‌ಐ,ದೇವಳದ ಭದ್ರತಾ ವಿಭಾಗದವರಿಗೆ ಮಾಹಿತಿ ನೀಡಿದ್ದಾರೆ. ದೇವಳದ ಭದ್ರತಾ ವಿಭಾಗದವರು ಕೂಡಲೇ ಗೋ ಶಾಲೆಗೆ ಹೋದಾಗ ಶಂಕಿತರು ಸ್ಥಳದಿಂದ
ಪರಾರಿಯಾಗಿದ್ದಾರೆ. ಗೋ ಶಾಲೆಯಿಂದ ನಾಪತ್ತೆಯಾಗಿದ್ದ ಒಂದು ದನ ಸಮೀಪದಲ್ಲಿ ಸಿಕ್ಕಿದ್ದು, ಉಳಿದ ಎಲ್ಲಾ ಹಸು-ಕರುಗಳು ಅಲ್ಲಿಯೇ ಸುರಕ್ಷಿತವಾಗಿದ್ದವು.
ಎಸ್‌ಐ ಹಾಗೂ ಕುಂದಾಪುರ ಡಿವೈಎಸ್‌ಪಿ ಘಟನೆ ನಡೆದ ಸ್ಥಳಕ್ಕೆ ಬೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿ ಬಂದವರ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಖಚಿತ ಮಾಹಿತಿ ದೊರೆತಿದ್ದು,ಶಂಕಿತರ ಪತ್ತೆಗೆ
ಕಾರ್ಯಚರಣೆ ಮುಂದುವರಿಸಿದ್ದಾರೆ.
ಏನಿದು ಪ್ರಾಜೆಕ್ಟ್ ?
ದೇವಸ್ಥಾನ, ಜ್ಯುವೆಲರಿ, ಅಂಗಡಿ, ಮನೆ, ಫ್ಲ್ಯಾಟ್ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಇಡುವುದು ಒಂದು ಭಾಗವಾದರೆ ಅಳವಡಿಸಿದ ಸಿಸಿಟಿವಿ ದೃಶ್ಯಗಳನ್ನು ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು ಕಾಯಲಾಗುತ್ತದೆ. ಸುಮಾರು 60 ಕ್ಯಾಮರಾಗಳ ಮಾನಿಟರಿಂಗ್ ಮಾಡುವ ಮೂಲಕ ಆರಂಭಗೊಂಡ ಈ ಸಂಸ್ಥೆ ಇದೀಗ ನಾಲ್ಕು ಜಿಲ್ಲೆಗಳಲ್ಲಿ ಅಳವಡಿಸಿರುವ ಬರೋಬ್ಬರಿ 450ಗಳನ್ನು ಮಾನಿಟರಿಂಗ್ ಮಾಡುತ್ತಿದೆ. ರಾತ್ರಿ-ಹಗಲು ಸಿಸಿಟಿವಿ ಕಣ್ಗಾವಲು ಕಾಯುತ್ತಿದೆ.
ಕುಂದಾಪುರದ ಅಂಕದಕಟ್ಟೆಯಲ್ಲಿ ಟಿವಿ, ಲ್ಯಾಪ್ ಟಾಪ್ ಮೂಲಕ ನಿತ್ಯದ ಮಾನಿಟರಿಂಗ್ ವ್ಯವಸ್ಥೆಯನ್ನು ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಮಾಡುತ್ತಿದೆ. ಇದರ ವ್ಯವಸ್ಥಾಪಕ ಕೃಷ್ಣ ಪೂಜಾರಿ ಅವರ ತಂಡ ಪೊಲೀಸರ ಮಾರ್ಗದರ್ಶನದಲ್ಲಿ ಕಣ್ಗಾವಲು ಕಾಯುತ್ತಿದೆ.