ಹೇಳಿ ಕೇಳಿ ಅದು ಮರುಭೂಮಿ. ನೀರಿಗೆ ತತ್ವಾರ. ಅಲ್ಲೇನು ಬೆಳೆದೀತು. ಹೆಚ್ಚೆಂದರೆ ಒಂದಿಷ್ಟು ಖರ್ಜೂರದ ಮರಗಳು…ಅಷ್ಟೇ ತಾನೆ…ತರಕಾರಿ ಹೂ ಹಣ್ಣು ಎಲ್ಲ ಎಲ್ಲಿಂದ ಬರಬೇಕು..
ಹೀಗೆಂದುಕೊಂಡಿದ್ದ ನನಗೇ ಅಚ್ಚರಿಯಾಗುವಂತೆ ಎದುರಾಯಿತು‌ ಅರಬ್ ನೆಲದಲ್ಲಿ ಹರಡಿಕೊಂಡ ಹಸಿರು..ಹಿಂದೆಲ್ಲ ನಮ್ಮಲ್ಲಿ ಹೇಳುವುದಿತ್ತು – ಉಸುಕು ಹಿಂಡಿ ಎಣ್ಣೆ ತೆಗೆಯುವ ಜನ ಎಂದು. ಇವರು ಸಮುದ್ರ ಹಿಂಡಿ ನೀರು ತೆಗೆಯುವ ಜನರೂ ಹೌದು. ಸೌದಿ ಅರೇಬಿಯಾದಲ್ಲಿ ಇಂದು‌ ಕೃಷಿ ಕ್ಷೇತ್ರದಲ್ಲಿ ಆಗಿರುವ ಪ್ರಗತಿ ಕಂಡು ಮೂಗಿನ ಮೇಲೆ ಬೆರಳು ಇಡುವಂತಾಯಿತು .
ಡೇರಿ ಉತ್ಪನ್ನ, ಹಣ್ಣು , ತರಕಾರಿ, ಹೂವು ಮೊದಲಾದವುಗಳನ್ನೆಲ್ಲ ಬೇರೆ ದೇಶಗಳಿಗೆ ರಫ್ತು ಮಾಡುವುದರೊಡನೆ ಸ್ವದೇಶದಲ್ಲಿ ಸ್ವಾವಲಂಬನೆಯನ್ನೂ ಸಾಧಿಸಿರುವುದು ವಿಶೇಷ. ಅರಬ್ ನಾಡಿನ ಕೆಲವು ಭಾಗಗಳು ಕೆಲ ಮಟ್ಟಿಗೆ ಕೃಷಿಗೆ ಯೋಗ್ಯವಾಗಿದ್ದರೂ ಉಳಿದ ಭಾಗಗಳಲ್ಲಿ ಪರಿಷ್ಕರಿಸಿದ ತ್ಯಾಜ್ಯ ನೀರನ್ನೇ ಬಳಸಬೇಕಾಗುತ್ತದೆ. ಹಟಕ್ಕೆ ಬಿದ್ದ ಸರಕಾರ ಮರಳು ಭುಮಿಯನ್ನು ಕೃಷಿಭೂಮಿಯನ್ನಾಗಿಸುವ ದಿಸೆಯಲ್ಲಿ ೧೯೭೦-೮೦ ರದಶಕಗಳಲ್ಲಿ ಬಹಳ ದೊಡ್ಡ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಒಂದು ಹಂತದಲ್ಲಿ ಗೋದಿಯನ್ನು ಸಹ ಬೆಳೆದು ೩೦ ದೇಶಗಳಿಗೆ ರಫ್ತು ಮಾಡುತ್ತಿತ್ತು.
ಇಲ್ಲಿ ಭೂಮಿಯ ಕೊರತೆಯಿಲ್ಲ. ನೀರಿನ ಒರತೆ ಕಡಿಮೆ ಅಷ್ಟೆ. ೧೯೬೮ ರಲ್ಲಿ ಸಾರ್ವಜನಿಕ ಭೂ ವಿತರಣಾ ಸುಗ್ರೀವಾಜ್ಞೆ ಮೂಲಕ ವೈಯಕ್ತಿಕವಾಗಿ ೫ ರಿಂದ ೧೦೦ ಹೆಕ್ಟೇರ್ ಪಾಳು ಭೂಮಿ ಜನರಿಗೆ ಉಚಿತವಾಗಿ ನೀಡಿ , ಅವರಿಗೆ ಸಹಾಯ ಧನವನ್ನೂ ನೀಡಿ ಕೃಷಿಗೆ ಉತ್ತೇಜನ ನೀಡಿದ ಸರಕಾರ , ಕೃಷಿ ಮಾಡುವ ಕಂಪನಿಗಳಿಗೆ ೪೦೦ ಹೆಕ್ಟೇರ್ ತನಕ ಮತ್ತು ಕೆಲ ಸಂಸ್ಥೆಗಳಿಗೆ ಅದಕ್ಕಿಂತ ಹೆಚ್ವು ಭೂಮಿಯನ್ನು ನೀಡಿ ಪ್ರೋತ್ಸಾಹಿಸಿತು. ಕಾರ್ಪೊರೇಟ್ ಕೃಷಿಗೆ ಸಹಾಯಧನ, ರೈತರಿಗೆ ದೀರ್ಘಾವಧಿ ಬಡ್ಡಿ ರಹಿತ ಸಾಲ, ಕೃಷಿವಸ್ತುಗಳಿಗೆ ತೆರಿಗೆ ರಹಿತ ಆಮದು ಸೌಲಭ್ಯ ಒದಗಿಸಲಾಯಿತು. ಈ ಮೂಲಕ ಒಂದು ರೀತಿ ಕೃಷಿಕ್ರಾಂತಿಯೇ ನಡೆದುಹೋಯಿತು. ೨ ರಿಂದ ೫ ವರ್ಷಗಳ ಕಾಲ ಕೃಷಿ ಮಾಡಿದವರಿಗೆ ನಂತರ ಆ ಭೂಮಿಯ ಪೂರ್ಣ ಹಕ್ಕನ್ನೂ ನೀಡಲಾಯಿತು. ಹಣ್ಣು, ತರಕಾರಿ, ಕಲ್ಲಂಗಡಿ, ದ್ರಾಕ್ಷಿ, ಸಿಟ್ರಸ್ ಹಣ್ಣು, ಈರುಳ್ಳಿ, ಸ್ಕ್ವ್ಯಾಷ್‌, ಟೊಮೆಟೊ, ಅನಾನಸ್, ಬಾಳೆಹಣ್ಣು, ಮಾವಿನಹಣ್ಣು, ಪೇರಲ , ಅಲ್ಲದೆ ಬಾರ್ಲಿ, ಸೋರ್ಗಮ್ ಮೊದಲಾದವುಗಳ ಕೃಷಿ ಬಹಳ ದೊಡ್ಡ ಪ್ರಮಾಣದಲ್ಲಿ ನಡೆದಿದೆ.
ಸಾವಯವ ಕೃಷಿಯನ್ನು ಮುನ್ನೂರು ಪ್ರತಿಶತದಷ್ಟು ಹೆಚ್ಚಿಸುವ ಗುರಿ ಸರಕಾರದ್ದಾಗಿದೆ. ಆದರೂ ಉತ್ಪನ್ನ ಮತ್ತು ವೆಚ್ಚದ ದೃಷ್ಟಿಯಿಂದ ಇದು ಲಾಭದಾಯಕವೇನೂ ಅಲ್ಲವೆನ್ನುವುದನ್ನು ಮನಗಂಡ ಸರಕಾರ ಈಗ ಥೈಲ್ಯಾಂಡ್, ಅರ್ಜೆಂಟೀನಾ, ಇಂಡೋನೇಷ್ಯಾ, ಯುಎಸ್, ಆಫ್ರಿಕಾ ಮೊದಲಾದೆಡೆ ಕೃಷಿಭೂಮಿ ಖರೀದಿಸಿ ಬೆಳೆಯುವ ಯೋಜನೆ ರೂಪಿಸಿದೆ.
೨೦೨೨ ರಲ್ಲಿ ದೇಶದ ಕೃಷಿ ಉತ್ಪನ್ನದಲ್ಲಿ ಶೇಕಡಾ ೩೮ ರಷ್ಟು ಹೆಚ್ಚಳ ಕಂಡುಬಂದಿರುವುದು ಗಮನಾರ್ಹ.
೨೦೧೮ ರಲ್ಲಿ ಸೌದಿ ಅರೇಬಿಯಾದ ಕೃಷಿ ಉತ್ಪನ್ನದ ಪ್ರಮಾಣ ಎಷ್ಟಿತ್ತೆಂಬುದನ್ನು ಗಮನಿಸಿ.
ಖರ್ಜೂರ ಬೆಳೆ-1,300,000 ಟನ್.
ಕಲ್ಲಂಗಡಿ- 634000 ಟನ್
ಬಾರ್ಲಿ – 624 000 ಟನ್
ಗೋದಿ – 586 000 ಟನ್
ಬಟಾಟೆ -482000 ಟನ್
ಟೊಮೆಟೊ-312000 ಟನ್
ಬೇಳೆ -144000 ಟನ್
ಸವತೆಕಾಯಿ -115000 ಟನ್…
ಜುಬೇಲ್ ನ ಕೆಲ ತರಕಾರಿ ಅಂಗಡಿಗಳನ್ನು ಸ್ವತಃ ನೋಡಿದಾಗ ಬಹಳ ಖುಷಿಯಾಯಿತು. ಅಲ್ಲಿ ಇಲ್ಲದ ತರಕಾರಿಗಳೇ ಇಲ್ಲ. ಎಲ್ಲ ತಾಜಾ ತಾಜಾ. ಮರುಭೂಮಿಯಲ್ಲೇ ಬೆಳೆದದ್ದು.

✒️ ಎಲ್ .ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ.