ಜಗತ್ತಿನಲ್ಲಿ ಅತಿಹೆಚ್ಚು ಜನ ಮಾತನಾಡುವ ಆರನೆಯ ಭಾಷೆಯೆನಿಸಿರುವ ಅರೇಬಿಕ್ ಅರಬ್ ರಾಷ್ಟ್ರಗಳ ಅಧಿಕೃತ ರಾಷ್ಟ್ರೀಯ ಭಾಷೆ. ಸುಮಾರು ೨೭-೩೦ ರಾಜ್ಯ- ಪ್ರಾಂತಗಳಲ್ಲಿ ಈ ಭಾಷೆ ಬಳಕೆಯಲ್ಲಿದೆ. ವಿಶ್ವಸಂಸ್ಥೆ ಸ್ವೀಕರಿಸಿದ ಆರು ಅಧಿಕೃತ ಭಾಷೆಗಳಲ್ಲಿ ಅರೇಬಿಕ್ ಸಹ ಒಂದು. ಪ್ರಾಚೀನ ಅರೇಬಿಕ್ ಭಾಷೆಗೆ ಹಲವು ಶತಮಾನಗಳ ಇತಿಹಾಸವಿದ್ದರೂ ಏಳನೆಯ ಶತಮಾನದಲ್ಲಿ ಇದನ್ನು ಕುರಾನ್ ಗೆ ಬಳಸಿದ ನಂತರ ಅದಕ್ಕೆ ಇಸ್ಲಾಂ ಧರ್ಮದ ಪ್ರಾರ್ಥನಾ ಭಾಷೆಯಾಗಿ ಹೆಚ್ಚಿನ ಪ್ರಾಶಸ್ತ್ಯ ಬಂತು. ಇಸ್ಲಾಂ ಧರ್ಮದೊಡನೆ ಆ ಭಾಷೆಯೂ ಜಗತ್ತಿನಾದ್ಯಂತ ಪಸರಿಸಿಕೊಂಡಿತು. ಇದರಲ್ಲಿ ೩೨ ಕ್ಕೂ ಹೆಚ್ಚು ಪ್ರಭೇದಗಳಿವೆ.
ಬೆಡೋಯಿನ್ ಬುಡಕಟ್ಟು ಜನಾಂಗ ಮೂಲವಾದ ಸೌದಿ ಅರೇಬಿಯಾದ ಕಾವ್ಯವೂ ಮೂಲತಃ ಬೆಡೋಯಿನ್ ಜಾನಪದ ಬೇರುಗಳನ್ನುಹೊಂದಿದ್ದು. ಅಲ್ಲಿಯ ಸಂಗೀತ ನೃತ್ಯಗಳು ಸಹ ಅದೇ ಸಂಪ್ರದಾಯಕ್ಕೆ ಒಳಪಟ್ಟಿದ್ದು. ೨೦ ನೇ ಸತಮಾನದ ಮೊದಲ ಭಾಗದಲ್ಲಿ ಅರೇಬಿಕ್ ಸಾಹಿತ್ಯ ಆಧುನಿಕತೆಯತ್ತ ಹೊರಳಿಕೊಂಡಿತು. ಅರಬ್ ಜಗತ್ತು ಬಹಳ ದೊಡ್ಡದು. ಮೊರಾಕ್ಕೊದಿಂದ ಇರಾಕ್ ವರೆಗೆ, ಪಶ್ಚಿಮ ಅಟ್ಲಾಂಟಿಕ್ ಸಾಗರದಿಂದ ಪೂರ್ವ ಅರಬ್ಬಿ ಸಮುದ್ರದವರೆಗೆ, , ಮಧ್ಯಪ್ರಾಚ್ಯ , ಉತ್ತರ ಆಫ್ರಿಕಾ ಪ್ರದೇಶದವರೆಗೆ ಅದರ ವಿಸ್ತಾರ. ಕುರಾನ್ ರಚಿಸಿದ ಪ್ರವಾದಿ ಮಹ್ಮದರ ಸಮಕಾಲೀನ ಮಹಿಳಾ ಕವಯಿತ್ರಿ ಅಲ್ ಖಾನ್ಸಾ ಎಂಬವಳಿಗೂ ಆಗ ಜನಪ್ರಿಯತೆ ಇತ್ತೆನ್ನಲಾಗಿದೆ.
ಆಧುನಿಕ ಅರಬ್ ಕಾವ್ಯ ಕ್ಷೇತ್ರದಲ್ಲಿ ಮೊಹ್ಮದ ಫರಿ( ೧೯೧೪-೨೦೦೪), ತಾರಿಕ್ ಜಮಾಖ್ರೀ(೧೯೧೪-೮೭), ಹಸನ್ ಅಲ್ ಕುರಾಶೀ(೧೯೨೬-೨೦೦೪) ಮೊದಲಾದವರೆಲ್ಲ ಪ್ರವರ್ತಕ ಕವಿಗಳೆಂದು ಗುರುತಿಸಿಕೊಂಡಿದ್ದಾರೆ . ಮೊದಲ ಸೌದಿ ಕಾದಂಬರಿ ” ದಿ ಟ್ವಿನ್ಸ್” ೧೯೩೦ ರಲ್ಲಿ ಅಬ್ದುಲ್ ಅಲ್ಕುದ್ದಸ್ ಅಲನ್ಸಾರಿ ಎಂಬವರಿಂದ ರಚಿತವಾಯಿತು. ತುರ್ಕಿ ಅಲ್ಹಮದ್, ಅಬ್ದುಕಲ್ ರಾಜಾ ಅಲಿಮ್ ಮೊದಲಾದವರೂ ಜನಪ್ರಿಯ ಕಾದಂಬರಿಕಾರರೆನಿಸಿದ್ದಾರೆ. ಅಬ್ದುಲ್ ರಹಮಾನ್ ಮುನೀಫ್ ಎಂಬವರು ಬರೆದ ಪುಸ್ತಕಗಳು ಆಡಳಿತದಿಂದ ನಿಷೇಧಕ್ಕೊಳಗಾದದ್ದಲ್ಲದೆ ಅವರ ಸೌದಿ ಪೌರತ್ವವೂ ರದ್ದಾಗಿತ್ತು. ಗಲ್ಫ ಆಫ್ ರಿಯಾದ್ ಅತಿ ಹೆಚ್ಚು ಮಾರಾಟವಾದ ಕಾದಂಬರಿ.
ಇಸ್ಲಾಂ ಧಾರ್ಮಿಕ ಪರಂಪರೆ ಸಂಸ್ಕೃತಿಗಳ ಪ್ರಭಾವ ಸಾಹಿತ್ಯದ ಮೇಲೂ ಬಿದ್ದಿರುವುದು ಸಹಜ. ಮಾಧ್ಯಮದಂತೆ ಸಾಹಿತ್ಯವೂ ಅರಸೊತ್ತಿಗೆಗೆ ಒಳಗಾಗುವುದು ವಿಶೇಷವೇನಲ್ಲ. ಬರೆಹಗಾರರಿಗೆ ಪೂರ್ಣ ಸ್ವಾತಂತ್ರ್ಯವಿಲ್ಲದಿದ್ದರೂ ಸರಕಾರದ ಸಂಸ್ಕೃತಿ ಮತ್ತು ಮಾಹಿತಿ ಸಚಿವಾಲಯ ಸಾಹಿತ್ಯ ಮತ್ತು ಪ್ರಕಾಶನ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಹಲವು ಯೋಜನೆಗಳನ್ನು ರೂಪಿಸುತ್ತಬಂದಿದೆ. ಸುಮಾರು ಹನ್ನೆರಡು ಲಿಟರರಿಕ್ಲಬ್ ಗಳಿದ್ದು ಅವು ವಾರ್ಷಿಕ ಪುಸ್ತಕ ಮೇಳ, ಸೆಮಿನಾರ್, ಚರ್ಚೆ , ಅನುವಾದ ಕಾರ್ಯಾಗಾರ ಮೊದಲಾದವುಗಳನ್ನೇರ್ಪಡಿಸಲಾಗುತ್ತಿದೆ. ಕಿಂಗ್ ಫೈಸಲ್ ಫೌಂಡೇಶನ್ ಸಾಹಿತ್ಯದ ಅಂತಾರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಿದೆ. ಮಕ್ಕಳ ಸಾಹಿತ್ಯಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಂಥಾಲಯಗಳ ಬೆಳವಣಿಗೆಯತ್ತ ವಿಶೇಷ ಗಮನ ಕೊಡಲಾಗುತ್ತಿದೆ. ಸೌದಿ ಸಾಹಿತ್ಯ ಮತ್ತು ಪ್ರಕಾಸನ , ಭಾಷಾಂತರ ಆಯೋಗ ಲೇಖಕರ, ಪ್ರಕಾಸಕರ ಮತ್ತು ಅನುವಾದಕರ ಸಲುವಾಗಿ ಹೊಸ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಆಗಾಗ ಸಾಹಿತ್ಯೋತ್ಸವಗಳು, ಪುಸ್ತಕ ಪ್ರದರ್ಶನಗಳನ್ನೇರ್ಪಡಿಸಲಾಗುತ್ತಿದೆ.
( ಸಶೆಷ)

 

️ ️ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ