ಭಾಗ -2
ಸಾವಿರದೊಂದು ಕತೆಗಳ ಅರೇನಿಯನ್ ನೈಟ್ಸ್ ಭಾರತೀಯ ಕಥಾ ಸಂಪ್ರದಾಯವನ್ನು ಅನುಸರಿಸಿಯೇ ರೂಪುಗೊಂಡಿದ್ದು. ಭಾರತ ಕತೆಗಳ ಕಣಜವಿದ್ದಂತೆ. ಸಹಸ್ರಾರು ವರ್ಷಗಳ ನಮ್ಮ ಭಾರತೀಯ ಕಥಾ ಪರಂಪರೆ ವಿಶ್ವಕ್ಕೇ ಮಾದರಿಯಾದುದು. ಸಂಸ್ಕೃತದ ಕಥಾಸರಿತ್ಸಾಗರ, ಪಂಚತಂತ್ರ ಮೊದಲಾದವುಗಳಿಂದ ಜಗತ್ತಿನ ಎಲ್ಲಾ ದೇಶಭಾಷೆಗಳು ಪ್ರೇರಣೆ ಪಡೆದಿವೆ. ನೈಟ್ಸ್ ನಲ್ಲಿ ಅನುಸರಿಸಿರುವ ಕಥೆಯೊಳಗೊಂದು ಕಥೆಯ ಪದ್ಧತಿ ಭಾರತದ್ದೆ. ಇಲ್ಲಿನ ಕಥೆಗಳಲ್ಲಿ ವಿಷಯ ವೈವಿಧ್ಯತೆಯೂ ಇದೆ. ನೀತಿಕತೆ, ಪ್ರೇಮಕತೆ, ವಿಜ್ಞಾನ, ಶೃಂಗಾರ, ದುರಂತ, ಹಾಸ್ಯ , ಸಾಹಸ ಎಲ್ಲ ಬಗೆಯ ಕತೆಗಳಿವೆ. ಎಲ್ಲವೂ ಕಾಲ್ಪನಿಕವಾದವುಗಳು. ಕೆಲವೆಡೆ ಸಾಂದರ್ಭಿಕ ಅರೇಬಿಯನ್ ಜಾನಪದ ಕಾವ್ಯ ಸೇರಿಸಲಾಗಿದೆ.

ಅರೇಬಿಯನ್ ನೈಟ್ಸ್ ವಿಶ್ವಸಾಹಿತ್ಯದ ಮೇಲೂ ದಟ್ಟ ಪ್ರಭಾವ ಬೀರಿದೆ. ಖ್ಯಾತ ಸಾಹಿತಿಗಳಾದ ಟಾಲ್ಸ್ಟಾಯ್, ಪುಷ್ಕಿನ್, ರಶ್ದಿ,ವಾಲ್ಟರ್ ಸ್ಕಾಟ್, ಮಾರ್ವೆಲ್ಸ್, ಫ್ಲಾಬರ್ಟ್ ಮೊದಲಾದವರೆಲ್ಲ ಇದಕ್ಕೆ ಉದಾಹರಣೆ. ಈ ಕತೆಗಳನ್ನಾಧರಿಸಿ ವಿವಿಧ ಭಾಷೆಗಳಲ್ಲಿ ನೂರಾರು ಚಲನಚಿತ್ರಗಳು ನಿರ್ಮಾಣವಾಗಿವೆ. ಇವು ಅನುವಾದವಾಗದ ಭಾಷೆಗಳಂತೂ ಯಾವುದೂ ಉಳಿದಿಲ್ಲ. ಇದು ಮಧ್ಯಕಾಲೀನ ಜಾನಪದ ಕತೆಗಳ ಸಂಗ್ರಹ. ಈ ಕೃತಿ ಒಟ್ಟಾರೆ ನೀಡುವ ಸಂದೇಶವಾದರೂ ಏನು ಎನ್ನುವುದು ಮುಖ್ಯ. ಆರಂಭದಲ್ಲಿ ರಾಣಿ ಶಹರಜಾದೆ ಒಂದು ಮಾತು ಹೇಳುತ್ತಾಳೆ- ” ನಾನು ಈ ಮೂಲಕ ಮುಸ್ಲಿಂ ಮಹಿಳೆಯನ್ನು ವಿಮೋಚನೆಗೊಳಿಸಬಯಸುತ್ತೇನೆ”. ಸಸಾನಿಯನ್ ದೊರೆ ತನ್ನ ಒಬ್ಬಳು ಪತ್ನಿ ತನಗೆ ಮೋಸ ಮಾಡಿದ್ದಕ್ಕಾಗಿ ಸ್ತ್ರೀಕುಲವನ್ನೇ ದ್ವೇಷಿಸುವುದು ಸ್ವಲ್ಪ ಅತಿರೇಕವೆನಿಸಿದರೂ ಅದು ಅಸಂಭವವೇನಲ್ಲ. ಆದರೆ ಆತನ ಆ ಕ್ರೂರ ಅಮಾನವೀಯ ನಿರ್ಧಾರವನ್ನು ತಡೆಗಟ್ಟುವುದು ರಾಣಿಯ ಉದ್ದೇಶವಾಗಿತ್ತು. ಅದಕ್ಕಾಗಿ ಅವಳು ಕತೆಯ ಮೇಲೊಂದು ಕತೆ ಹೆಣೆಯುತ್ತ ಅರಸ ಹೆಣ್ಣನ್ನು ಕೊಲ್ಲುವ ಕ್ರಿಯೆಯನ್ನು ಮುಂದೂಡುತ್ತ ಹೋಗುತ್ತಾಳೆ. ಮೂರು ವರ್ಷ ಈ ರೀತಿ ರಾಣಿ ಕತೆ ಹೇಳುವುದನ್ನು ಮುಂದುವರಿಸಿದಾಗ ಅಷ್ಟರಲ್ಲಿ ರಾಜನ ಭಾವನೆ ಬದಲಾಗಿ ಆತ ರಾಣಿಯನ್ನು ಕ್ಷಮಿಸುತ್ತಾನೆ. ಇದು‌ ಇಲ್ಲಿ ಬಹಳ ಮುಖ್ಯ ಅಂಶ. ಇದಕ್ಕಾಗಿ ಕೃತಿಕಾರ ಬಳಸಿಕೊಂಡ ತಂತ್ರ ಗಮನ ಸೆಳೆಯುವಂತಹದು. ಸಿಂದಬಾದ ನಾವಿಕ, ಅಲಿಬಾಬಾ, ಅಲ್ಲಾದೀನನ ದೀಪ ಮೊದಲಾದ ಕತೆಗಳು ತಮ್ಮ ಮನೋರಂಜನಾತ್ಮಕ ಗುಣದಿಂದ ಎಲ್ಲರಿಗೂ ಪ್ರಿಯವಾದವು. ಸಾರ್ವಕಾಲಿಕ ಜನಪ್ರಿಯತೆ ಈ ಕೃತಿಯದು.

ಸೌದಿ ಸಾಹಿತ್ಯ ಮತ್ತು ಲೇಖಕರು

ಸೌದಿ ಅರೇಬಿಯಾದ ಸಾಹಿತ್ಯಕ್ಷೇತ್ರವೂ ಅರಸೊತ್ತಿಗೆಯ ಕೆಲ ನಿರ್ಬಂಧಗಳಿಂದೊಡಗೂಡಿರುವುದು ಸಹಜ. ಆದರೂ ಅಲ್ಲಿ ಎಲ್ಲ ಬಗೆಯ ಒತ್ತಡಗಳ ನಡುವೆಯೇ ಸಾಹಿತ್ಯ ರಚನೆ ಮಾಡುತ್ತಿರುವ ಸಾಕಷ್ಟು ಬರೆಹಗಾರರಿದ್ದಾರೆ. ಅಲ್ಲದೇ ಬಹಳಷ್ಟು ಮಹಿಳೆಯರೂ ಮಹತ್ವದ ಲೇಖಕಿಯರಾಗಿ ಹೊರಹೊಮ್ಮಿದ್ದಾರೆ. ಅವರಲ್ಲಿ “ರಿಯಾದ್ ನ ಹುಡುಗಿಯರು” ಎಂಬ ಕಾದಂಬರಿ ಬರೆದ ರಾಜಾ ಅಲ್ ಸಾನಿಯಾ ಬಹಳ ಪ್ರಸಿದ್ಧ ಕಾದಂಬರಿಕಾರ್ತಿ. ರಾಜಾ ಆಲೆಮ್ ಅವರ ಪಾರಿವಾಳದ ನೆಕ್ಲೆಸ್ ಎಂಬ ಕಾದಂಬರಿಯೂ ತುಂಬ ಜನಪ್ರಿಯವಾಗಿದೆ. ಸೌದಿ ಸಂಸ್ಕೃತಿ ಸಚಿವಾಲಯ ಗುರುತಿಸಿದ ಪ್ರಮುಖ ೧೪ ಬರೆಹಗಾರರಲ್ಲಿ ಇವರ ಹೆಸರುಗಳು ಇವೆ. ಬದ್ರಿಯಾ ಅಲ್ ಬಿಶ್ರ್ ಅವರ “ಅಲ್ ಆಸಾ ಬೀದಿಯಲ್ಲಿ ಪ್ರೇಮಕಥೆಗಳು”, ಅಮೀರಾ ಅಲ್ ಮುದಿ ಅವರ ” ಅಪಾಯಕಾರಿ ಮಹಿಳೆ”, ರೆಹಬ್ ಸಾದ್ ಅವರ” ನನ್ನಲ್ಲಿ ಸಾವಿರ ಮಹಿಳೆಯರು”, ಸಾರಾ ಅಲ್ ಅಲಿಯಾವಿ ಅವರ ” ಮಹಿಳೆಯ ಆಟಿಕೆ”, ಪತ್ರಕರ್ತ ಸಾಹಿತಿ ಓಬಿದ್ ಅಲ್ ಸುಹೈಮಿ ಅವರ” ನಾಲ್ವರು ಸೌದಿ ಹುಡುಗಿಯರು” , ಅಡೆಲ್ ಅವರ ” ಸೌದಿ ನಿರಾಶ್ರಿತರು” ಮೊದಲಾದ ಕೃತಿಗಳು ಸೌದಿ ಸಾಹಿತ್ಯದ ಪ್ರಮುಖ ಕೃತಿಗಳೆಂದು ಪರಿಗಣಿಸಲ್ಪಟ್ಟಿವೆ.

ಆದರೆ ಹಿಂದೆ ಓರ್ವ ಸಾಹಿತಿಯ ಕೃತಿಯನ್ನು ನಿಷೇಧ ಮಾಡಿ ಅವರ ಪೌರತ್ವ ರದ್ದು ಮಾಡಿದ ಸಂದರ್ಭವೂ ಇದೆ. ಆದ್ದರಿಂದ ಲೇಖಕರು ಬಹಳ ಎಚ್ಚರಿಕೆಯಿಂದಲೇ ಬರೆಯಬೇಕಾದ ಸ್ಥಿತಿ ಇದೆ. ಸಾಹಿತ್ಯದ ಬೆಳವಣಿಗೆಗೆ ಸರಕಾರ ಪ್ರೋತ್ಸಾಹ ಕೊಡುತ್ತಿಲ್ಲವೆಂದೇನಲ್ಲ. ಆದರೆ ಅದು ಒಂದು ಮಿತಿಯೊಳಗೆ ಮಾತ್ರ. ಭಾರತದ ಹಾಗೆ ಇಲ್ಲಿನ ಸಂವಿಧಾನ ಯಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ , ಲೇಖನಿ ಸ್ವಾತಂತ್ರ್ಯ ನೀಡಿಲ್ಲ.
ರಾಜಪ್ರಭುತ್ವವನ್ನು ಟೀಕಿಸುವುದು ಅಪಾಯದ ಸಂಗತಿ.

(ಚಿತ್ರ: ಸೌದಿಯ ಸಾಹಿತಿಗಳಾದ ಘವ್ಜಿಯಾ ಅಬುಖಾಲಿದ ಮತ್ತು ಘೌಜಿ ಅಬ್ದುಲ್ ರಹಮಾನ್ ಅಲ್ ಹೊಸೈಬಿ.)